ಕಾಸರಗೋಡು : ನರೇಂದ್ರ ಮೋದಿ ಸರ್ಕಾರದ ಒಂಬತ್ತನೇ ವರ್ಷಾಚರಣೆಯ ಅಂಗವಾಗಿ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ಕೇಂದ್ರದ ಮಾಜಿ ಸಚಿವ, ಬಿಜೆಪಿ ಹಿರಿಯ ಮುಖಂಡ ಮುಕ್ತಾರ್ ಅಬ್ಬಾಸ್ ನಖ್ವಿ ಪಾಲ್ಗೊಂಡರು.
ಈ ಸಂದರ್ಭ ಚೆಮ್ನಾಡು ಪಂಚಾಯಿತಿಯ ಶಿವಶಕ್ತಿ ಶಂಬುನಾಡ್ ಮತ್ತು ಪರವನಡ್ಕದ ನವೋದಯ ಕ್ಲಬ್ ನ ಕಾರ್ಯಕರ್ತರೊಂದಿಗೆ ಟಿಫಿನ್ ಬೈಠಕ್(ಚಾಯ್ ಪೇ ಚರ್ಚಾ) ನಡೆಸಿದರು.
ಕ್ಲಬ್ ಸದಸ್ಯರೊಂದಿಗೆ ಸಂವಾದ ನಡೆಸಿದ ಮುಕ್ತಾರ್ ಅಬ್ಬಾಸ್ ನಖ್ವಿ ಅವರು ಕಳೆದ ಒಂಬತ್ತು ವರ್ಷಗಳಿಂದ ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿರುವ ಅಭಿವೃದ್ಧಿ ಚಟುವಟಿಕೆಗಳು ಹಾಗೂ ಕೇಂದ್ರ ಸರ್ಕಾರದ ಯೋಜನೆಗಳಿಗೆ ಕೇರಳ ಸರ್ಕಾರ ಮರುನಾಮಕರಣ ಮಾಡುವ ಮೂಲಕ ಇದರ ಸಂಪೂರ್ಣ ಲಾಭವನ್ನು ತಮ್ಮದಾಗಿಸಲು ಯತ್ನಿಸುತ್ತಿದೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದರು. ಟಿಫಿನ್ ಬೈಠಕ್‍ನಲ್ಲಿ ಕೇರಳದ ಉಪಾಹಾರವಾದ ಇಡ್ಲಿ, ಸಾಂಬಾರ್ ಮತ್ತು ಎಲೆವಡ ಸೇರಿದಂತೆ ವಿವಿಧ ಖಾದ್ಯ ಸೇವಿಸುವ ಮೂಲಕ ಯುವಕರೊಂದಿಗೆ ಸಂವಾದ ನಡೆಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು, ರಾಜ್ಯ ಕಾರ್ಯದರ್ಶಿಗಳಾದ ಕೆ.ರಂಜಿತ್,ವಕೀಲ ಕೆ.ಪಿ.ಪ್ರಕಾಶಬಾಬು, ಜಿಲ್ಲಾ ಕಾರ್ಯದರ್ಶಿಗಳಾದ ಎನ್.ಮಧು, ಮನುಲಾಲ್ ಮೇಲತ್, ಕೋಶದ ಸಂಯೋಜಕ ಎನ್.ಬಾಬುರಾಜ್, ಮಾಧ್ಯಮ ಪ್ರಕೋಷ್ಠದ ಸಂಚಾಲಕ ವೈ.ಕೃಷ್ಣದಾಸ್, ಉದುಮ ಕ್ಷೇತ್ರದ ಉಪಾಧ್ಯಕ್ಷ ಸದಾಶಿವನ್ ಮಣಿಯಂಗಾನಂ, ಸೌಮ್ಯ ಪದ್ಮನಾಭನ್, ರಬಿತಾ ಉಪಸ್ಥಿತರಿದ್ದರು. ಶಿವಶಕ್ತಿ ಕ್ಲಬ್ ಅಧ್ಯಕ್ಷ ಶಶಿಧರನ್ ಸ್ವಾಗತಿಸಿದರು. ನವೋದಯ ಕ್ಲಬ್ ಅಧ್ಯಕ್ಷ ವಿನೋದ್ ವಂದಿಸಿದರು.