ನವದೆಹಲಿ (PTI): ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆ ಮತ್ತು ಈ ವರ್ಷಾಂತ್ಯದಲ್ಲಿ ನಡೆಯಲಿರುವ ಐದು ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಚುನಾವಣಾ ಆಯೋಗವು ದೇಶದಾದ್ಯಂತ ವಿದ್ಯುನ್ಮಾನ ಮತಯಂತ್ರಗಳು (ಇವಿಎಂ) ಮತ್ತು ಮತ ದೃಢೀಕರಣ ಯಂತ್ರಗಳ ಮೊದಲ ಹಂತದ ಪರಿಶೀಲನೆಯನ್ನು ಪ್ರಾರಂಭಿಸಿದೆ ಎಂದು ಮೂಲಗಳು ತಿಳಿಸಿವೆ.
'ಅಣಕು ಮತದಾನಗಳು' ಮೊದಲ ಹಂತದ ಪರಿಶೀಲನೆ (ಎಫ್‌ಎಲ್‌ಸಿ) ಪ್ರಕ್ರಿಯೆಯ ಭಾಗವಾಗಿದೆ. ಕೇರಳದ ಎಲ್ಲಾ ಕ್ಷೇತ್ರಗಳು ಸೇರಿದಂತೆ ದೇಶದಾದ್ಯಂತ ಹಂತ ಹಂತವಾಗಿ ಪರಿಶೀಲನೆ ನಡೆಯಲಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಅಣಕು ಮತದಾನದ ಬಗ್ಗೆ ಕೇಳಿದ ಪ್ರಶ್ನೆಗೆ ಅಧಿಕಾರಿ ಉತ್ತರಿಸಿದರು.
ಐದು ರಾಜ್ಯಗಳಾದ ರಾಜಸ್ಥಾನ, ಮಿಜೋರಾಂ, ಛತ್ತೀಸಗಢ, ತೆಲಂಗಾಣ, ಮಧ್ಯಪ್ರದೇಶ ಹಾಗೂ ಉಪಚುನಾವಣೆ ನಡೆಯಲಿರುವ ವಿಧಾನಸಭಾ ಮತ್ತು ಲೋಕಸಭಾ ಸ್ಥಾನಗಳಲ್ಲಿಯೂ ಪರಿಶೀಲನೆ ನಡೆಯಲಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಪ್ರಸ್ತುತ ವಯನಾಡ್, ಪುಣೆ ಮತ್ತು ಚಂದ್ರಾಪುರ (ಮಹಾರಾಷ್ಟ್ರ), ಗಾಜಿಪುರ (ಉತ್ತರ ಪ್ರದೇಶ) ಮತ್ತು ಅಂಬಾಲಾ (ಹರಿಯಾಣ) ಲೋಕಸಭಾ ಸ್ಥಾನಗಳು ಖಾಲಿ ಇವೆ.
ವಿದ್ಯುನ್ಮಾನ ಮತಯಂತ್ರಗಳು ಮತ್ತು ಮತ ದೃಢೀಕರಣ ಯಂತ್ರಗಳನ್ನು ತಯಾರಿಸುವ ಬಿಇಎಲ್ ಮತ್ತು ಇಸಿಐಎಲ್ ಎಂಜಿನಿಯರ್‌ಗಳು ಪರಿಶೀಲನೆ ನಡೆಸುವರು.
ದೋಷಯುಕ್ತ ಯಂತ್ರಗಳನ್ನು ದುರಸ್ತಿ ಅಥವಾ ಬದಲಿಗಾಗಿ ತಯಾರಕ ಕಂಪನಿಗಳಿಗೆ ಹಿಂದಿರುಗಿಸಲಾಗುತ್ತದೆ.