ಪೆರ್ಲ: ಸ್ವರ್ಗ ಪ್ರದೇಶದಲ್ಲಿ ಬಿ.ಎಸ್.ಎನ್.ಎಲ್. ನೆಟ್ ವರ್ಕ್ ಸಮಸ್ಯೆಗೆ ಶಾಶ್ವತ ಪರಿಹಾರ ಎಂಬಂತೆ ಮೊಳಕ್ಕಾಲು ಪ್ರದೇಶದಲ್ಲಿ ಮೊಬೈಲ್ ಟವರ್ ಸ್ಥಾಪನೆಗೆ ಅನುಮತಿ ದೊರಕಿದೆ.
ಜನರ ದೈನಂದಿನ ಜೀವನದ ಒಂದು ಭಾಗವಾದ ಮೊಬೈಲ್ ಸೇವೆಗೆ ಸ್ವರ್ಗ ಪ್ರದೇಶದಲ್ಲಿ ಸಂಪರ್ಕವು ದೊಡ್ಡ ಸಮಸ್ಯೆಯಾಗಿತ್ತು. ರೇಂಜ್ ಸಮಸ್ಯೆಯಿಂದಾಗಿ ಸರಕಾರಿ,ಬ್ಯಾಂಕ್ ,ಖಾಸಗಿ ಸಂಸ್ಥೆಗಳ ದೈನಂದಿನ ಕಾರ್ಯಗಳಿಗೆ ಬಹಳಷ್ಟು ತೊಂದರೆ ಉಂಟಾಗುತ್ತಿತ್ತು.ಇದರ ಪರಿಹಾರಕ್ಕಾಗಿ ಎಣ್ಮಕಜೆ ಗ್ರಾಮ ಪಂಚಾಯತ್ ಸದಸ್ಯರಾದ ರಾಮಚಂದ್ರ ಎಂ,ನರಸಿಂಹ ಪೂಜಾರಿ ಭಾರತೀಯ ದೂರವಾಣಿ ಸಂಪರ್ಕ ಇಲಾಖೆಯನ್ನು ನಿರಂತರವಾಗಿ ಒತ್ತಡ ಹೇರಿ ಅಧಿಕಾರಿಗಳೊಂದಿಗೆ ಸ್ವರ್ಗ ಪ್ರದೇಶದ ಆಸುಪಾಸಿನಲ್ಲಿ ಟವರ್ ಸ್ಥಾಪನೆ ಗೆ ಸ್ಥಳ ಸಂದರ್ಶಿಸಿದರು.ಅಂತಿಮವಾಗಿ ಅರಣ್ಯ ಇಲಾಖೆಯ ಆಧೀನದಲ್ಲಿರುವ ತೂಂಬಡ್ಕ ಪ್ರದೇಶದಲ್ಲಿ ಬಿ.ಎಸ್.ಎನ್.ಎಲ್ ಅಧಿಕೃತವಾಗಿ ಹಸಿರು ನಿಶಾನೆ ತೋರಿಸಿತು.ಮೊಬೈಲ್ ಟವರ್ ನ್ನು 2023 ಡಿಸೆಂಬರ್ ತಿಂಗಳಲ್ಲಿ ಪೂರ್ತಿಗೊಳಿಸಲು ದೂರವಾಣಿ ಸಂಪರ್ಕ ಇಲಾಖೆ ನಿರ್ಧರಿಸಿದೆ.
ಮೊಬೈಲ್ ಟವರ್ ಸ್ಥಾಪನೆಗೆ ಪೂರ್ವ ಭಾವೀಯಾಗಿ ಸ್ಥಳದ ಜನರಿಗೆ ಮನವರಿಕೆ ,ಅಭಿಪ್ರಾಯ ಸಂಗ್ರಹಕ್ಕಾಗಿ ಎಂ.ಕೆ ಬಾಲಕೃಷ್ಣ ಗ್ರಂಥಾಲಯ ಮತ್ತು ವಾಚನಾಲಯದಲ್ಲಿ ಪರಿಶಿಷ್ಟ ವರ್ಗ ವಿಭಾಗದ ಜನರ ಸಭೆಯನ್ನು ಕರೆಯಲಾಯಿತು.ಸಭೆಯ ಅಧ್ಯಕ್ಷತೆಯನ್ನು ಹಿರಿಯರಾದ ಕೊರಗು ನಾಯ್ಕ್ ದೇಶಮೂಲೆ ವಹಿಸಿದರು.
ಪ . ವರ್ಗ ಇಲಾಖೆ ವಿಸ್ತರಣಾಧಿಕಾರಿ ಸುಧಾಕರನ್,ಅರಣ್ಯಾಧಿಕಾರಿ ಅಭಿಲಾಶ್.ಆರ್ ಬಿ.ಎಸ್.ಎನ್.ಎಲ್ ಅಧಿಕಾರಿಗಳಾದ ಜಯಕೃಷ್ಣ, ಎಣ್ಮಕಜೆ ಗ್ರಾಮ ಪಂಚಾಯತ್ ಸದಸ್ಯರಾದ ರಾಮಚಂದ್ರ ಎಂ, ಎಸ್.ಬಿ ನರಸಿಂಹ ಪೂಜಾರಿ ಉಪಸ್ಥಿತರಿದ್ದರು. ಪ್ರಮೋಟರ್ ಮಹೇಶ್ ಸ್ವಾಗತಿಸಿ ಮಲ್ಲಿಕಾ ವಾಲ್ತಾಜೆ ವಂದಿಸಿದರು.