ನ್ಯೂಯಾರ್ಕ್: ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ನೇತೃತ್ವ ವಹಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಯೋಗದ ಹಕ್ಕುಸ್ವಾಮ್ಯ ಯಾರ ಬಳಿಯೂ ಇಲ್ಲ ಎಂದು ಹೇಳಿದ್ದಾರೆ.
ಮೋದಿ ಅವರು, ಕೇಂದ್ರ ಕಚೇರಿಯ ಆವರಣಕ್ಕೆ ಆಗಮಿಸುತ್ತಿದ್ದಂತೆಯೇ ಅಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಗೆ ಗೌರವ ಸಲ್ಲಿಸಿದರು. ಬಳಿಕ ಯೋಗದ ಇತಿಹಾಸ ಮತ್ತು ಪ್ರಾಮುಖ್ಯದ ಬಗ್ಗೆ ಮಾತನಾಡಿದರು.
'2023 ಅನ್ನು ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷವನ್ನಾಗಿ ಘೋಷಿಸುವ ಭಾರತದ ಪ್ರಸ್ತಾವನೆಗೆ ಕಳೆದ ವರ್ಷ ಇಡೀ ಜಗತ್ತು ಬೆಂಬಲ ನೀಡಿತ್ತು. ಇದೀಗ ಮತ್ತೆ ಯೋಗಕ್ಕಾಗಿ ಒಂದಾಗಿರುವುದನ್ನು ನೋಡಲು ಸಂತಸವಾಗುತ್ತದೆ' ಎಂದಿದ್ದಾರೆ.
'ಯೋಗ ಭಾರತದಿಂದ ಬಂದದ್ದು ಮತ್ತು ಇದು ಅತ್ಯಂತ ಪ್ರಾಚೀನವಾದದ್ದು. ಯೋಗವು ಹಕ್ಕುಸ್ವಾಮ್ಯಗಳಿಂದ ಮುಕ್ತವಾಗಿದೆ. ಇದಕ್ಕಾಗಿ ಯಾವುದೇ ಶುಲ್ಕ ಪಾವತಿಸಬೇಕಿಲ್ಲ. ಯೋಗವನ್ನು ಯಾರು ಬೇಕಾದರೂ ಮಾಡಬಹುದಾಗಿದ್ದು, ಸಾರ್ವತ್ರಿಕವಾಗಿದೆ' ಎಂದು ಹೇಳಿದ್ದಾರೆ.
ಇದೇ ವೇಳೆ ಮಾತನಾಡಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಮುಖ್ಯಸ್ಥ ಸಬಾ ಕೊರೊಸಿ, 'ಯೋಗವು ನಮ್ಮ ದೈಹಿಕ ಕಾರ್ಯಕ್ಷಮತೆಯನ್ನು ಬದಲಿಸುತ್ತದೆ. ಅದು ನಮ್ಮ ಮಾನಸಿಕ ಮತ್ತು ಬೌದ್ಧಿಕ ಕ್ಷಮತೆಯನ್ನು ವೃದ್ಧಿಸುತ್ತದೆ. ನಾನು ಯೋಗದ ಆರಾಧಕನಾಗಿದ್ದೇನೆ. ನಮ್ಮ ಜಗತ್ತು ಸಮತೋಲನ ಮತ್ತು ಸ್ವಯಂ ನಿಯಂತ್ರಣವನ್ನು ಹೊಂದಬೇಕಿದೆ. ಅದನ್ನು ಸಾಧಿಸಲು ಯೋಗ ನೆರವಾಗಲಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿಶ್ವಸಂಸ್ಥೆಯ ಕೇಂದ್ರ ಕಚೇರಿಯ ಆವರಣದಲ್ಲಿ ನಡೆಯುತ್ತಿರುವ 'ಯೋಗ' ಕಾರ್ಯಕ್ರಮಕ್ಕೆ 180ಕ್ಕೂ ಹೆಚ್ಚು ರಾಷ್ಟ್ರಗಳ ಪ್ರತಿನಿಧಿಗಳು ಸಾಕ್ಷಿಯಾಗಿದ್ದಾರೆ.