ನವದೆಹಲಿ: ಗ್ರಾಹಕರ ಹಣ ಮತ್ತು ಸೆಕ್ಯೂರಿಟಿಗಳನ್ನು ದುರುಪಯೋಗಪಡಿಸಿಕೊಂಡಿರುವ ಬ್ರೋಕರೇಜ್ ಸಂಸ್ಥೆ ಕಾರ್ವಿ ಸ್ಟಾಕ್ ಬ್ರೋಕಿಂಗ್ ಲಿಮಿಟೆಡ್ (ಕೆಎಸ್‌ಬಿಎಲ್) ನೋಂದಣಿಯನ್ನು ಸೆಬಿ ರದ್ದುಗೊಳಿಸಿದೆ.
ಗ್ರಾಹಕರ ಹಣವನ್ನು ಅವರ ಖಾತೆಯಿಂದ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುವಲ್ಲಿ ಕಾರ್ವಿ ತೊಡಗಿಸಿಕೊಂಡಿದೆ ಎಂದು ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಹೇಳಿದೆ. ಈ ಮೊತ್ತವನ್ನು ನಂತರ ಬ್ರೋಕರೇಜ್ ಗುಂಪಿನ ಗುಂಪು ಕಂಪನಿಗಳಿಗೆ ರವಾನೆ ಮಾಡಲಾಯಿತು. ಹೆಚ್ಚುವರಿಯಾಗಿ, ಕಾರ್ವಿ ಗ್ರಾಹಕರ ಸೆಕ್ಯೂರಿಟಿಯನ್ನು ಹೆಚ್ಚಿಸುವ ವಾಗ್ದಾನ ಮಾಡುವ ಮೂಲಕ ಹಣವನ್ನು ಸಂಗ್ರಹಿಸಿದರು.
ಆದೇಶದ ಪ್ರಕಾರ, 2019ರ ಸೆಪ್ಟೆಂಬರ್‌ವರೆಗೆ ಗ್ರಾಹಕರ ಷೇರುಗಳನ್ನು ಒತ್ತೆಯಿಟ್ಟು ಹಣಕಾಸು ಸಂಸ್ಥೆಗಳಿಂದ ಕಾರ್ವಿ ಒಟ್ಟು ಸಾಲವು 2,032.67 ಕೋಟಿ ರೂಪಾಯಿಗಳಾಗಿದ್ದು, ಈ ಅವಧಿಯಲ್ಲಿ ಸ್ಟಾಕ್ ಬ್ರೋಕರ್ ವಾಗ್ದಾನ ಮಾಡಿದ ಸೆಕ್ಯುರಿಟಿಗಳ ಮೌಲ್ಯವು 2,700 ಕೋಟಿ ರೂಪಾಯಿಯಾಗಿದೆ.
ಸೆಬಿ ತನ್ನ ಆದೇಶದಲ್ಲಿ, ಬ್ರೋಕರೇಜ್ ಸಂಸ್ಥೆಯು ಗ್ರಾಹಕರ ಖಾತೆಗಳನ್ನು ಇತ್ಯರ್ಥಪಡಿಸಲಿಲ್ಲ ಮತ್ತು ಗ್ರಾಹಕರ ಆಸ್ತಿ ಮತ್ತು ಹೊಣೆಗಾರಿಕೆಗಳ ಸರಿಯಾದ ಮೌಲ್ಯಮಾಪನದಲ್ಲಿ ಫೋರೆನ್ಸಿಕ್ ಆಡಿಟರ್‌ನೊಂದಿಗೆ ಸಹಕರಿಸಲಿಲ್ಲ ಎಂದು ಹೇಳಿದೆ. ಕಾರ್ವಿಯನ್ನು 2020ರ ನವೆಂಬರ್ ನಲ್ಲಿ ಡೀಫಾಲ್ಟರ್ ಎಂದು ಘೋಷಿಸಿತ್ತು. ಬಿಎಸ್ಇ ಮತ್ತು ಎನ್ಎಸ್ಇಯಿಂದ ಡಿಲಿಟ್ ಮಾಡಲಾಗಿದೆ ಎಂದು ಸೆಬಿ ಹೇಳಿದೆ. ಮಧ್ಯವರ್ತಿಗಳ ನಿಯಮಾವಳಿಗಳ ಅಡಿಯಲ್ಲಿ ಕಾರ್ವಿ ಸ್ಟಾಕ್ ಬ್ರೋಕಿಂಗ್ ಲಿಮಿಟೆಡ್‌ನ ನೋಂದಣಿ ಪ್ರಮಾಣಪತ್ರವನ್ನು ಸೆಬಿ ರದ್ದುಗೊಳಿಸಿದೆ.
ನಿಯಂತ್ರಕರು ಕಳೆದ ತಿಂಗಳು ಕಾರ್ವಿ ಮತ್ತು ಅದರ ಪ್ರವರ್ತಕ ಕೋಮಂದೂರು ಪಾರ್ಥಸಾರಥಿ ಅವರನ್ನು ಸೆಕ್ಯುರಿಟೀಸ್ ಮಾರುಕಟ್ಟೆಯಿಂದ ಏಳು ವರ್ಷಗಳ ಕಾಲ ನಿರ್ಬಂಧಿಸಿದ್ದರು. ಗ್ರಾಹಕರ ಹಣವನ್ನು ಸುಲಿಗೆ ಮಾಡಲು ಅವರಿಗೆ ನೀಡಲಾದ ಪವರ್ ಆಫ್ ಅಟಾರ್ನಿ ದುರ್ಬಳಕೆಗಾಗಿ ಅವರಿಗೆ 21 ಕೋಟಿ ರೂ. ದಂಡ ವಿಧಿಸಿತ್ತು.