ತಿರುವನಂತಪುರಂ: ಇನ್ಮುಂದೆ ಎಸ್ ಎಸ್ ಎಲ್ ಸಿ ಮತ್ತು ಪ್ಲಸ್ ಟು ಪರೀಕ್ಷೆಗಳಲ್ಲಿ ಅದ್ಭುತ ಯಶಸ್ಸು ಗಳಿಸಬೇಕಾದರೆ ಇನ್ನೂ ಒಂದು ಅಡ್ಡಿಯನ್ನು ದಾಟಬೇಕಾಗುತ್ತದೆ.
ಇನ್ನು ಮುಂದೆ ಉತ್ತಮ ಯಶಸ್ಸನ್ನು ಪಡೆಯಲು ಪತ್ರಿಕೆಯನ್ನೂ ಓದಬೇಕು. ಮುಂದಿನ ಮೌಲ್ಯಮಾಪನಕ್ಕೆ ನೀಡಲಾಗುವ ಶೇಕಡಾ 20 ಅಂಕಗಳಲ್ಲಿ 10 ಪ್ರತಿಶತವನ್ನು ಪತ್ರಿಕೆ ಮತ್ತು ಪುಸ್ತಕ ಓದುವಿಕೆಯ ಅರಿವಿನ ವಿಸ್ತಾರತೆಗಾಗಿ ನೀಡಲಾಗುವುದು ಎಂದು ಸರ್ಕಾರ ನಿರ್ಧರಿಸಿದೆ. ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಶೀಘ್ರದಲ್ಲೇ ಆದೇಶ ಹೊರಡಿಸಲಿದೆ.
ವಿದ್ಯಾರ್ಥಿಗಳಿಗೆ 100 ಅಂಕಗಳ ಪರೀಕ್ಷೆಯಲ್ಲಿ ಶೈಕ್ಷಣಿಕ ಸಾಧನೆಗಾಗಿ 20 ಅಂಕಗಳನ್ನು ಮತ್ತು 50 ಅಂಕಗಳ ಪರೀಕ್ಷೆಗೆ 10 ಅಂಕಗಳನ್ನು ನಿರಂತರ ಮೌಲ್ಯಮಾಪನದ ಮೂಲಕ ನೀಡಲಾಗುತ್ತದೆ. ಆದರೆ ಇನ್ಮುಂದೆ ವಿದ್ಯಾರ್ಥಿಗಳ ದಿನಪತ್ರಿಕೆ ಹಾಗೂ ಪುಸ್ತಕ ಓದುವ ಆಸಕ್ತಿ ಹಾಗೂ ಶ್ರೇಷ್ಠತೆಯನ್ನು ಪರಿಗಣಿಸಿ 10 ಅಂಕ ನೀಡಲು ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ಸುದ್ದಿ ವಾಚನ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳು ಕೂಡ ಈ ಮೂಲಕ ಗ್ರೇಸ್ ಮಾಕ್ರ್ಸ್ ಪಡೆಯಬಹುದು.
ಮೂರು ಪ್ರಮುಖ ಮಲಯಾಳಂ ದಿನಪತ್ರಿಕೆಗಳ ಸುದ್ದಿ ಮತ್ತು ಅದಕ್ಕೆ ಸಂಬಂಧಿಸಿದ ವಿಮರ್ಶೆಯನ್ನು ಆಧರಿಸಿ ಮಕ್ಕಳು ಸುದ್ದಿಯನ್ನು ಸಿದ್ಧಪಡಿಸಬೇಕು. ಶಾಲಾ ಹಂತದಿಂದ ರಾಜ್ಯ ಮಟ್ಟದವರೆಗೆ ಸ್ಪರ್ಧೆ ನಡೆಯಲಿದೆ. ರಾಜ್ಯ ಮಟ್ಟದಲ್ಲಿ ಮೊದಲ ಮೂರು ಸ್ಥಾನ ಪಡೆದವರು ಕ್ರಮವಾಗಿ 20, 17 ಮತ್ತು 14 ಅಂಕಗಳನ್ನು ಪಡೆಯುತ್ತಾರೆ.
ಇದೇ ಸಂದರ್ಭದಲ್ಲಿ ರಾಜ್ಯದ ಶಾಲೆಗಳಲ್ಲಿ ಪ್ರತಿ ವರ್ಷ ವಾಚನ ದಿನ ಕಳೆದಿದ್ದು ಬಿಟ್ಟರೆ ಗ್ರಂಥಾಲಯ ಚಟುವಟಿಕೆಗಳು ಕುಂಠಿತವಾಗಿವೆ ಎಂಬ ಆರೋಪವೂ ಕೇಳಿ ಬಂದಿದೆ. ರಾಜ್ಯದ 2077 ಹೈಯರ್ ಸೆಕೆಂಡರಿ ಶಾಲೆಗಳ ಪೈಕಿ ಕೇವಲ ನಾಲ್ಕು ಶಾಲೆಗಳಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ನಿಗದಿಪಡಿಸಿದಂತೆ ಗ್ರಂಥಾಲಯಗಳಿವೆ. ಅದೇ ರೀತಿ ಈ ಪಟ್ಟಿಯಲ್ಲಿ ಒಂದೇ ಒಂದು ಸರ್ಕಾರಿ ಶಾಲೆ ಇಲ್ಲ ಎಂಬುದು ವಾಸ್ತವ. ಅಲ್ಲದೆ, ಹತ್ತು ಸಾವಿರ ಪುಸ್ತಕಗಳಿರುವ ಶಾಲೆಗಳಲ್ಲಿ ಗ್ರಂಥಪಾಲಕರ ನೇಮಕವಾಗಲಿದೆ ಎಂಬ ಶಿಕ್ಷಣ ಇಲಾಖೆಯ ಮಾತು ಹೇಳಿಕೆಯಲ್ಲೇ ಉಳಿದಿದೆ.