ಕೋಲ್ಕತ್ತಾ: ಪಶ್ಚಿಮ ಬಂಗಾಳ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಅವರ ಪುತ್ರಿ ಸುಚೇತನಾ ಭಟ್ಟಾಚಾರ್ಯ ಅವರು ತಾವು "ಟ್ರಾನ್ಸ್ಮ್ಯಾನ್" ಎಂದು ಘೋಷಿಸಿಕೊಂಡಿದ್ದು, ಶೀಘ್ರದಲ್ಲೇ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ (ಎಸ್ಆರ್ಎಸ್) ಒಳಗಾಗುವುದಾಗಿ ಹೇಳಿದ್ದಾರೆ.
ಇತ್ತೀಚಿಗೆ ಎಲ್ ಜಿಬಿಟಿಕ್ಯೂ ಸಮುದಾಯದ ಜನರ ಜೀವನೋಪಾಯದ ಕುರಿತು ವಿಚಾರ ಸಂಕಿರಣವನ್ನು ಉದ್ದೇಶಿಸಿ ಮಾತನಾಡಿದ ಸುಚೇತನಾ ಅವರು, ನಾನು ಪುರುಷನಾಗಿ ಗುರುತಿಸಿಕೊಂಡಿದ್ದೇನೆ ಮತ್ತು ದೈಹಿಕವಾಗಿಯೂ ಪುರುಷನಾಗಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಸುಚೇತನಾ ಅವರ ಚಿತ್ರವನ್ನು LGBTQ ಕಾರ್ಯಕರ್ತ ಸುಪ್ರವಾ ರಾಯ್ ಅವರ ಸಾಮಾಜಿಕ ಮಾಧ್ಯದಲ್ಲಿ ಪೋಸ್ಟ್ ಹಾಕಿದ ನಂತರ ಈ ವಿಷಯ ಮೊದಲು ಬಹಿರಂಗವಾಗಿದೆ. ರಾಯ್ ಪ್ರಕಾರ, ವಿಚಾರ ಸಂಕಿರಣದಲ್ಲಿ ಸುಚೇತನಾ ಅವರು ತಾನು "ಟ್ರಾನ್ಸ್ಮ್ಯಾನ್" ಎಂದು ಘೋಷಿಸಿಕೊಂಡಿದ್ದರು ಮತ್ತು ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸೆಯ ನಂತರ 'ಅವರು ಸುಚೇತನ್' ಎಂದು ಕರೆಯಲ್ಪಡುವುದಾಗಿ ಹೇಳಿದ್ದರು. ನಂತರ, ಸುಚೇತನಾ ಅವರು ಮಾಧ್ಯಮವೊಂದಕ್ಕೆ ಈ ವಿಚಾರವನ್ನು ಖಚಿತಪಡಿಸಿದ್ದು, ತಾವು 41 ವರ್ಷದ ವಯಸ್ಕ ವ್ಯಕ್ತಿಯಾಗಿದ್ದು, ಇದು ನನ್ನ ಸ್ವಂತ ನಿರ್ಧಾರವಾಗಿದ್ದು, ನನ್ನ ಜೀವನಕ್ಕೆ ಸಂಬಂಧಿಸಿದ ಎಲ್ಲಾ ನಿರ್ಧಾರಗಳನ್ನು ನಾನೇ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ದಯವಿಟ್ಟು ಈ ವಿಚಾರದಲ್ಲಿ ನನ್ನ ಕುಟುಂಬವನ್ನು ಎಳೆಯಬೇಡಿ. ಇದು ನನ್ನ ವೈಯಕ್ತಿಕ ನಿರ್ಧಾರ ಎಂದು ಅವರು ಜನರಿಗೆ ಮನವಿ ಮಾಡಿದ್ದಾರೆ. ಶಸ್ತ್ರಚಿಕಿತ್ಸೆಗೆ ಹೋಗುವ ಮುನ್ನ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳುವ ಬಗ್ಗೆಯೂ ಸುಚೇತನಾ ಖಚಿತಪಡಿಸಿದ್ದಾರೆ.