ಮುಳ್ಳೇರಿಯ: ಕನ್ನಡ ಮಾಧ್ಯಮ ಶಾಲೆಗೆ ಮಲಯಾಳ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಸರ್ಕಾರ ಮತ್ತೆ ಮುಂದುವರಿಸಿದೆ. ಅಡೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಮಕ್ಕಳಿಗೆ ತರಗತಿ ನಡೆಸಲು ಮಲಯಾಳಿ ಶಿಕ್ಷಕಿಯನ್ನು ನೇಮಕಾತಿ ನಡೆಸುವ ಮೂಲಕ ಕನ್ನಡಿಗರ ತಾಳ್ಮೆ ಪರೀಕ್ಷೆಗೆ ಸರ್ಕಾರ ಮತ್ತೆ ಮುಂದಾಗಿದೆ. ಶಾಲೆ ಪುನರಾರಂಭಗೊಳ್ಳುತ್ತಿದ್ದಂತೆ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಮತ್ತೆ ಸಂಕಷ್ಟ ಎದುರಾಗಿದೆ.
ಶನಿವಾರ ತರಗತಿ ಆರಂಭಗೊಳ್ಳುತ್ತಿದ್ದಂತೆ ಕನ್ನಡ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಮಲಯಾಳಿ ಶಾಲೆಗೆ ಆಗಮಿಸುತ್ತಿದ್ದಂತೆ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಪ್ರತಿಭಟಿಸಿದ್ದಾರೆ. ಪ್ರೌಢಶಾಲಾ ವಿಭಾಗದ ಸಾಮಾಜಿಕ ವಿಜ್ಞಾನ ವಿಷಯಕ್ಕೆ ಮಲಯಾಳಿ ಮಾಧ್ಯಮ ಶಿಕ್ಷಕಿ ಆಗಮಿಸಿದ್ದು, ವಿದ್ಯಾರ್ಥಿಗಳು ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ಕನ್ನಡ ಮಾಧ್ಯಮದಕ್ಕೆ ಮಲಯಾಳದಲ್ಲಿ ಪಾಠ ಮಾಡಿದಲ್ಲಿ ತಮಗೇನೂ ಅರ್ಥಮಾಡಿಕೊಳ್ಳಲಾಗುತ್ತಿಲ್ಲ ಎಂಬುದಾಗಿ ವಿದ್ಯಾರ್ಥಿಗಳು ಅಳಲು ವ್ಯಕ್ತಪಡಿಸಿದ್ದಾರೆ. ತರಗತಿ ಬಹಿಷ್ಕರಿಸಿದ ವಿದ್ಯಾರ್ಥಿಗಳು ಶಾಲಾ ವರಾಂಡದಲ್ಲಿ ಕುಳಿತು ಪ್ರತಿಭಟನೆ ಆರಂಭಿಸಿದ್ದಾರೆ. ಶಾಲೆಯಲ್ಲಿ ಕನ್ನಡ ಮಾದ್ಯಮ ವಿದ್ಯಾರ್ಥಿಗಳು ಮಲಯಾಳಿ ಶಿಕ್ಷಕಿ ವಿರುದ್ಧ ಪ್ರತಿಭಟನೆಗೆ ಮುಂದಾಗುತ್ತಿದ್ದಂತೆ ವಿದ್ಯಾರ್ಥಿಗಳ ಹೆತ್ತವರೂ ಶಾಲೆಗೆ ಆಗಮಿಸಿ, ತಮ್ಮ ಮಕ್ಕಳಿಗೆ ಕನ್ನಡ ಮಾಧ್ಯಮ ಶಿಕ್ಷಕರೇ ಪಾಠ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಮಲಯಾಳಿ ಶಿಕ್ಷಕಿಯನ್ನು ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಪಾಠಮಾಡುವುದನ್ನು ಹೊರತುಪಡಿಸುವಂತೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಜಿಲ್ಲೆಯ ಹಲವು ಶಾಲೆಗಳಲ್ಲಿ ಮಲಯಾಳಿ ಶಿಕ್ಷಕರು ಕನ್ನಡ ಪಾಠ ಮಾಡಲು ಆಗಮಿಸಿದ್ದು, ಬಹುತೇಕ ಶಾಲೆಗಳಲ್ಲಿ ಕನ್ನಡ ವಿದ್ಯಾರ್ಥಿಗಳು ಹಾಗೂ ಹೆತ್ತವರ ಬಲವಾದ ಪ್ರತಿಭಟನೆ ಹಿನ್ನೆಲೆಯಲ್ಲಿ ಹಿಂದೆ ಸರಿದಿದ್ದಾರೆ. ಕೆಲವು ಶಾಲೆಗಳಲ್ಲಿ ಇಂದಿಗೂ ಮಲಯಾಳಿ ಶಿಕ್ಷಕರು ಕನ್ನಡ ವಿದ್ಯಾರ್ಥಿಗಳಿಗೆ ಪಾಠಮಾಡುತ್ತಿದ್ದಾರೆ. ಜಿಲ್ಲೆಯ ಕೆಲವೊಂದು ಶಾಲೆಗಳಲ್ಲಿ ಮಲಯಾಳ ಶಿಕ್ಷಕರು ಪಾಠಮಾಡಲು ಆಗಮಿಸಿರುವುದರಿಂದ ಕನ್ನಡ ವಿದ್ಯಾರ್ಥಿಗಳು ಟಿಸಿ ಪಡೆದು ಬೇರೆ ಶಾಲೆಗೆ ತೆರಳಿದ್ದಾರೆ. ಇದರಿಂದ ಇಲ್ಲಿ ಮಕ್ಕಳ ಕೊರತೆಯಿಂದ ಕನ್ನಡ ವಿಭಾಗವನ್ನೇ ರದ್ದುಪಡಿಸಬೇಕಾಗಿ ಬಂದಿದೆ! ಕಾಸರಗೋಡಿನಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಸ್ಥಿತಿ ದಿನದಿಂದ ದಿನಕ್ಕೆ ಶೋಚನೀಯದೆಡೆ ತಲುಪುತ್ತಿದ್ದು, ಈ ಬಗ್ಗೆ ನಡೆಯುವ ಪ್ರತಿಭಟನೆಗೆ ಬೆರಳೆಣಿಕೆಯ ಸಂಘಟನೆಗಳು ಮಾತ್ರ ಕೈ ಜೋಡಿಸುತ್ತಿದೆ. ಬಹುತೇಕ ಕನ್ನಡಪರ ಸಂಘಟನೆಗಳು ಕನ್ನಡ ವಿದ್ಯಾರ್ಥಿಗಳು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ತಿರುಗಿಯೂ ನೋಡದ ಸ್ಥಿತಿಯಿದೆ. ಆದರೆ, ಕರ್ನಾಟಕ ಸರ್ಕಾರದಿಂದ ಲಭಿಸುವ ಲಕ್ಷಾಂತರ ರೂ. ಅನುದಾನ ಪಡೆದುಕೊಂಡು ಕಾರ್ಯಕ್ರಮ ಹಮ್ಮಿಕೊಳ್ಳುವಲ್ಲಿ ಈ ಸಂಘಟನೆಗಳು ಹಿಂದೆ ಬಿದ್ದಿಲ್ಲ ಎಂಬುದಾಗಿ ಕನ್ನಡಹೋರಾಟಗಾರರು ಅಳಲು ವ್ಯಕ್ತಪಡಿಸಿದ್ದಾರೆ.
ನಡೆದುದೇನು?:
ಶಾಲೆಯಲ್ಲಿ ತಾತ್ಕಾಲಿಕ ಶಿಕ್ಷಕರ ನೇಮಕಾತಿಯ ಸಂದರ್ಶನ ನಡೆಯುತ್ತಿದ್ದುವರಿಂದ ಮುಖ್ಯ ಶಿಕ್ಷಕರ ಭೇಟಿ ಸಾಧ್ಯವಾಗಲಿಲ್ಲ. ಅದುವರೆಗೂ ಕನ್ನಡ ವಿಧ್ಯಾರ್ಥಿಗಳು ಊಟವನ್ನೂ ಮಾಡದೆ ಉಪವಾಸವಿದ್ದು ಪ್ರತಿಭಟನೆ ನಡೆಸಿದರು. ಶಾಲಾ ಶಿಕ್ಷಕರು ಒತ್ತಾಯಿಸಿದರೂ, ಊಟ ಮಾಡದ ಮಕ್ಕಳು, 'ಮಲಯಾಳಿ ಶಿಕ್ಷಕಿ ನಮಗೆ ಬೇಡ' ಎಂಬ ಘೋಷಣೆಯೊಂದಿಗೆ ನಿರಶನ ಸತ್ಯಾಗ್ರಹ ನಡೆಸಿದರು. ಈ ಸಂದರ್ಭದಲ್ಲಿ ತಮ್ಮ ಕಚೇರಿಗೆ ಆಗಮಿಸಿದ ಶಾಲಾ ಮುಖ್ಯಶಿಕ್ಷಕರು ಘಟನಾವಳಿಗಳನ್ನು ತಿಳಿದ ಕೂಡಲೇ ಅಸ್ವಸ್ಥರಾಗಿ ಕುಸಿದು ಬಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಮುಖ್ಯಶಿಕ್ಷಕರಿಗೆ ವಿಶ್ರಾಂತಿಯ ಅಗತ್ಯವಿರುವುದರಿಂದ ವೈದ್ಯರ ಸಲಹೆಯ ಮೇರೆಗೆ ಅವರು ಮನೆಗೆ ತೆರಳಿದರು. ಮುಂದಿನ ಒಂದೆರಡು ದಿನ ವಿಶ್ರಾಂತಿಯ ಬಳಿಕ ಮುಖ್ಯ ಶಿಕ್ಷಕರು ಶಾಲೆಗೆ ಮರಳಿದ ಮೇಲೆ ಮತ್ತೆ ವಿವಾದ ಗರಿಗದರುವ ಸಾಧ್ಯತೆ ಇದೆ. ಸೋಮವಾರದಿಂದ ಮತ್ತೆ ಶಿಕ್ಷಕಿಯ ನೇಮಕಾತಿಯ ವಿರುದ್ಧ ಹೋರಾಟ ಮುಂದುವರಿಸುವುದಾಗಿ ಶಾಲೆಯ ಕನ್ನಡ ವಿದ್ಯಾರ್ಥಿಗಳು ಘೋಷಿಸಿದ್ದಾರೆ. ಯಾವುದೇ ಕಾರಣಕ್ಕೂ ಅರೆಬರೆ ಕನ್ನಡ ತಿಳಿದಿರುವ ಮಲಯಾಳಿ ಶಿಕ್ಷಕಿಯ ತರಗತಿಯಲ್ಲಿ ಭಾಗಿಗಳಾಗುವುದಿಲ್ಲ. ಕೂಡಲೇ ಕನ್ನಡಿಗೆ ಶಿಕ್ಷಕರನ್ನೇ ಅಡೂರು ಸರ್ಕಾರಿ ಶಾಲೆಗೆ ಕಳುಹಿಸಿಕೊಡುವಂತೆ ಜಿಲ್ಲಾ ವಿದ್ಯಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.