ಕಾಸರಗೋಡು: ಜಿಲ್ಲಾ ಪಂಚಾಯಿತಿ ವಿವಿಧ ಸ್ಥಳೀಯಾಡಳಿತ ಸಂಸ್ಥೆಗಳ ಸಹಯೋಗದಲ್ಲಿ ಜಿಲ್ಲೆಯಲ್ಲಿ ಆರಂಭವಾಗಲಿರುವ ಸಂಪೂರ್ಣ ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಮೂಲಕ ದೇಶಕ್ಕೆ ಮಾದರಿಯಾಗಬೇಕು ಎಂದು ಸಂಸದ ರಾಜಮೋಹನ್ ಉಣ್ಣಿತ್ತಾನ್ ತಿಳಿಸಿದ್ದಾರೆ.
ಅವರು ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ಕಾಞಂಗಾಡ್ ಬ್ಲಾಕ್ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾದ ಜನಪ್ರತಿನಿಧಿಗಳ ಸಭೆ ಉದ್ಘಾಟಿಸಿ ಮಾತನಾಡಿದರು. ಎರಡು ವರ್ಷಗಳಲ್ಲಿ, ಎಲ್ಲಾ ಅರ್ಜಿಗಳು ಆನ್‍ಲೈನ್ ಆಗಲಿದ್ದು, ಪ್ರತಿಯೊಬ್ಬರೂ ಡಿಜಿಟಲ್ ಸಾಕ್ಷರರಾಗಬೇಕು. ಬ್ಯಾಂಕಿಂಗ್ ಸಹಿತ ವಿವಿಧ ವ್ಯವಹಾರಗಳನ್ನು ಮನೆಯಿಂದಲೇ ನಿರ್ವಹಿಸಲು ಸಾಧ್ಯವಾಗುವ ರೀತಿಯಲ್ಲಿ ಡಿಜಿಟಲ್ ವ್ಯವಸ್ಥೆ ಬೆಳೆದುನಿಂತಿರುವುದರಿಂದ ಪ್ರತಿಯೊಬ್ಬನೂ ಡಿಜಿಟಲ್ ಸಾಕ್ಷರರಾಗುವುದು ಇಂದಿನ ಅಗತ್ಯಗಳಲ್ಲಿ ಒಂದಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾನವಾಜ್ ಪಾದೂರು, ನೀಲೇಶ್ವರ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಮಾಧವನ್ ಮಣಿಯರ, ಉಪಾಧ್ಯಕ್ಷೆ ಪಿ.ಕೆ.ಲಕ್ಷ್ಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಟಿ.ಕೆ.ರವಿ, ಎಸ್.ಪ್ರೀತಾ, ಪಿ.ಪಿ.ಪ್ರಸನ್ನ ಕುಮಾರಿ, ಕಾಞಂಗಾಡು ನಗರಸಭೆ ಉಪಾಧ್ಯಕ್ಷ ಬಿಲ್ಟೆಕ್ ಅಬ್ದುಲ್ಲಾ, ಜಿಪಂ ಸ್ಥಾಯೀ ಸಮಿತಿ ಅಧ್ಯಕ್ಷ ಶಿನೋಜ್ ಚಾಕೋ, ಜಿಪಂ ಸದಸ್ಯ ಎಂ.ಮನು, ಕಾಞಂಗಾಡು ಬ್ಲಾಕ್ ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಅಬ್ದುಲ್ ರಹಮಾನ್, ಜಿಲ್ಲಾ ಸಾಕ್ಷರತಾ ಸಮಿತಿ ಸದಸ್ಯ ಕೆ.ವಿ.ರಾಘವನ್ ಮಾಸ್ಟರ್ ಉಪಸ್ಥಿತರಿದ್ದರು. ಕೈಟ್ ಜಿಲ್ಲಾ ಕೋರ್ಡಿನೇಟರ್ ಶಂಕರನ್ ಮಾಸ್ಟರ್ ಯೋಜನೆ ಬಗ್ಗೆ ಮಹಿತಿ ನೀಡಿದರು. ಯೋಜನೆಯ ಜಿಲ್ಲಾ ಸಂಯೋಜಕ ರವೀಂದ್ರನ್ ಮಾಸ್ಟರ್ ಚಟುವಟಿಕೆ ಕ್ಯಾಲೆಂಡರ್‍ಪ್ರಸ್ತುತಪಡಿಸಿದರು. ಸಾಕ್ಷರತಾ ಮಿಷನ್ ಜಿಲ್ಲಾ ಸಂಯೋಜಕ ಪಿ.ಎನ್.ಬಾಬು ಸ್ವಾಗತಿಸಿದರು. ಮಾದರಿ ಪ್ರೇರಕ್ ಗೀತಾ ವಂದಿಸಿದರು.