ಮುಂಬೈ: ದೃಷ್ಟಿದೋಷ ಹೊಂದಿರುವ ವಿದ್ಯಾರ್ಥಿನಿಗೆ ಫಿಜಿಯೋಥೆರಪಿ ಕೋರ್ಸ್ ಅಧ್ಯಯನಕ್ಕೆ ಬಾಂಬೆ ಹೈಕೋರ್ಟ್ ಅನುಮತಿ ನೀಡಿದೆ.
ಕಲಿಕೆಗೆ ಆಸಕ್ತಿ ಹೊಂದಿರುವ ಇಂತಹ ಅಂಗವಿಕಲರಿಗೆ ನೆರವು ನೀಡುವುದು ಸಮಾಜದ ಸಾಮೂಹಿಕ ಜವಾಬ್ದಾರಿ. ಜೊತೆಗೆ, ಇವರಿಗೆ ಅಗತ್ಯ ನೆರವು ಕಲ್ಪಿಸಲು ಸೂಕ್ತ ಮಾರ್ಗೋಪಾಯಗಳನ್ನು ಹುಡುಕುವುದು ಸರ್ಕಾರದ ಹೊಣೆಗಾರಿಕೆಯಾಗಿದೆ ಎಂದು ಹೇಳಿದೆ.
ಈ ಕುರಿತು ವಿದ್ಯಾರ್ಥಿನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಗೌತಮ್ ಪಟೇಲ್ ಮತ್ತು ನೀಲಾ ಘೋಖಲೆ ಅವರಿದ್ದ ವಿಭಾಗೀಯ ಪೀಠವು, ಮಹಾರಾಷ್ಟ್ರದ ಆಕ್ಯುಪೇಷನಲ್ ಥೆರಪಿ ಮತ್ತು ಫಿಸಿಯೋಥೆರಪಿ ಕೌನ್ಸಿಲ್ ಮಂಡಿಸಿದ ವಾದವನ್ನು ತಳ್ಳಿಹಾಕಿತು.
'ದೃಷ್ಟಿದೋಷ ಹೊಂದಿದವರ ಕಲಿಕೆಗೆ ಪೂರಕವಾಗಿ ಪಠ್ಯಕ್ರಮ ರೂಪಿಸಬೇಕಿದೆ. ಅಂಗವಿಕಲರ ಕಾಯ್ದೆಯಲ್ಲೂ ಇದಕ್ಕೆ ಅನುಗುಣವಾಗಿ ಮಾರ್ಪಾಡು ಮಾಡುವುದು ಕೌನ್ಸಿಲ್‌ನ ಪ್ರಾಥಮಿಕ ಹೊಣೆಗಾರಿಕೆಯಾಗಿದೆ. ಇದರ ಹೊರತಾಗಿ ಬೇರೆ ಮಾರ್ಗವಿಲ್ಲ' ಎಂದು ಹೈಕೋರ್ಟ್ ತಾಕೀತು ಮಾಡಿತು.
ಕೌನ್ಸಿಲ್ ವಾದವೇನು?: ಫಿಜಿಯೋಥೆರಪಿಸ್ಟ್‌ಗಳು ಶಸ್ತ್ರಚಿಕಿತ್ಸೆ ಮಾಡಬೇಕಿದೆ. ಸರ್ಜಿಕಲ್ ಮತ್ತು ಐಸಿಯು ಘಟಕದಲ್ಲಿ ಕೆಲಸ ನಿರ್ವಹಿಸಬೇಕಾಗುತ್ತದೆ. ಹಾಗಾಗಿ, ದೃಷ್ಟಿದೋಷ ಇದ್ದವರು ಈ ಕೆಲಸ ನಿಭಾಯಿಸುವುದು ಕಷ್ಟ. ವೃತ್ತಿ ಅಭ್ಯಾಸವೂ ಸುಲಭವಲ್ಲ ಎಂದು ಹೇಳಿ ವಿದ್ಯಾರ್ಥಿನಿಯ ಪ್ರವೇಶಾತಿಗೆ ನಿರಾಕರಿಸಿತ್ತು.
ಈ ವಾದವನ್ನು ತಿರಸ್ಕರಿಸಿದ ಪೀಠವು, 'ದೇಶದ ವಿವಿಧ ಕೋರ್ಟ್‌ಗಳಲ್ಲಿ ದೃಷ್ಟಿದೋಷ ಇರುವ ವಿದ್ಯಾರ್ಥಿಗಳು, ವಕೀಲರು, ಸಹಾಯಕರು ಸೇರಿದಂತೆ ಹಲವರು ಕೆಲಸ ಮಾಡುತ್ತಿದ್ದಾರೆ' ಎಂದು ಹೇಳಿ ಕೌನ್ಸಿಲ್ ತಳೆದಿರುವ ನಿಲುವಿಗೆ ದಿಗ್ಭ್ರಮೆ ಮತ್ತು ಅಸಮಾಧಾನ ವ್ಯಕ್ತಪಡಿಸಿತು.
ಕೌನ್ಸಿಲ್ ನಿರ್ಧಾರವು ಸಾಂವಿಧಾನಿಕ ಹಾಗೂ ಆತ್ಮಸಾಕ್ಷಿಗೆ ಅನುಗುಣವಾಗಿ ಒಪ್ಪಿತವಲ್ಲ. ಜೊತೆಗೆ, ಪೀಠದ ಮುಂದೆ ಪ್ರವೇಶಾತಿ ನಿರಾಕರಣೆಗೆ ಸಂಬಂಧಿಸಿದಂತೆ ಸೂಕ್ತ ವೈದ್ಯಕೀಯ ವರದಿಯನ್ನೂ ಸಲ್ಲಿಸಿಲ್ಲ. ಇದು ಶಾಸನಬದ್ಧ ಕರ್ತವ್ಯಕ್ಕೆ ಬಗೆಯುವ ದ್ರೋಹವಾಗಿದೆ ಎಂದು ಹೇಳಿತು.
ಅಂಗವೈಕಲ್ಯ ಹೊಂದಿರುವವರು ಅಧ್ಯಯನ ಮತ್ತು ವೃತ್ತಿಯಲ್ಲಿ ನಿರೀಕ್ಷಿತ ಗುರಿ ಸಾಧಿಸಲಾರರು ಎಂದು ಹೇಳಿರುವುದು ಖಂಡನೀಯ. ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನ ಮಾಡಬೇಕಿದೆ ಎಂದು ಸೂಚಿಸಿತು.
ಪ್ರಕರಣ ಏನು?
ವಿದ್ಯಾರ್ಥಿನಿ ಜಿಲ್ ಜೈನ್ ಶೇ 40ರಷ್ಟು ದೃಷ್ಟಿದೋಷ ಹೊಂದಿದ್ದಾರೆ. 2022ರ ಮಾರ್ಚ್‌ನಲ್ಲಿ ದ್ವಿತೀಯ ಪಿಯು ಮುಗಿಸಿದ್ದ ಅವರು, ಫಿಜಿಯೋಥೆರಪಿ ಕೋರ್ಸ್ ಅಧ್ಯಯನಕ್ಕೆ ಆಸಕ್ತಿ ಹೊಂದಿ ಅರ್ಜಿ ಸಲ್ಲಿಸಿದ್ದರು. ಆದರೆ, ಅವರ ಪ್ರವೇಶಾತಿಗೆ ಕೌನ್ಸಿಲ್ ನಿರಾಕರಿಸಿತ್ತು.
ಈ ಮೊದಲು ದೃಷ್ಟಿದೋಷ ಹೊಂದಿದವರಿಗೆ ವೈದ್ಯಕೀಯ ಪದವಿ ಅಧ್ಯಯನಕ್ಕೆ ಅವಕಾಶ ನಿರ್ಬಂಧಿಸಲಾಗಿತ್ತು. ಬಳಿಕ ಶೇ 40ರಷ್ಟು ದೋಷ ಇದ್ದವರಿಗೆ ಅವಕಾಶ ಕಲ್ಪಿಸಲು ಕಾಯ್ದೆಗೆ ತಿದ್ದುಪಡಿ ತರಲಾಗಿದೆ.