ಮುಳ್ಳೇರಿಯ : ಮಲಯಾಳಿ ಶಿಕ್ಷಕಿಯ ನೇಮಕಾತಿ ಆದೇಶದಿಂದ ತೀರಾ ಆತಂಕಿತರಾದ ಕಾಸರಗೋಡು ಜಿಲ್ಲೆಯ ಅಡೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಹೈಸ್ಕೂಲು ಕನ್ನಡ ವಿಭಾಗದ ವಿದ್ಯಾರ್ಥಿಗಳು, ಸಂಬಂಧಿಸಿದ ಇಲಾಖೆಗಳಿಗೆ 'ನಮ್ಮ ಬದುಕು ರಕ್ಷಿಸಿ...' ಎಂದು ಆರ್ತನಾದದ ಮನವಿ ಸಲ್ಲಿಸಿದ್ದಾರೆ. ಸೌಲಭ್ಯವಂಚಿತ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಾದ ನಾವು, ಉತ್ತಮ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಉತ್ತಮ ಶಿಕ್ಷಣ ಪಡೆಯುವ ಹಂಬಲದಲ್ಲಿದ್ದೇವೆ. ನಮಗೆ ಮಲಯಾಳ ಭಾಷೆ ತಿಳಿದಿಲ್ಲ. ಮಲಯಾಳ ಶಿಕ್ಷಕಿಯ ಪಾಠ ಅರ್ಥವಾಗದು. 10ನೇ ತರಗತಿಯ ಪರೀಕ್ಷೆಗೆ ಸಿದ್ಧರಾಗುವ ನಮಗೆ ಈ ಸಮಸ್ಯೆ ಬಹಳ ದೊಡ್ಡ ಹೊಡೆತವಾಗಲಿದೆ. ಈ ಸಮಸ್ಯೆ ಪರಿಹರಿಸದಿದ್ದಲ್ಲಿ ನಮ್ಮ ಶೈಕ್ಷಣಿಕ ಮಟ್ಟ ಕುಸಿದು ಹೋಗಲಿದೆ. ದಯವಿಟ್ಟು ನಮಗೆ ಕನ್ನಡ ಶಿಕ್ಷಕರನ್ನು ಒದಗಿಸಿ, ನಮ್ಮ ಬದುಕು ಹಾಗೂ ಕನಸುಗಳನ್ನು ರಕ್ಷಿಸಿ' ಎಂದು ಅಡೂರು ಸರ್ಕಾರಿ ಶಾಲೆಯ ಕನ್ನಡ ವಿದ್ಯಾರ್ಥಿಗಳು ವಿವಿಧ ಇಲಾಖೆಗಳಿಗೆ ಮನವಿ ಮಾಡಿದ್ದಾರೆ. ಈ ಮನವಿಯನ್ನು ಕಾಸರಗೋಡು ಜಿಲ್ಲಾಧಿಕಾರಿ, ಕಾಸರಗೋಡು ಡಿಡಿಇ, ಕಾಸರಗೋಡು ಡಿಇಒ, ಕಾಸರಗೋಡು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಿಗೆ, ಕೇರಳ ರಾಜ್ಯ ಮಕ್ಕಳ ಹಕ್ಕು ಸಂರಕ್ಷಣಾ ಸಮಿತಿಯ ಮುಖ್ಯಸ್ಥರಿಗೆ ಹಾಗೂ ಕಾಸರಗೋಡು ಜಿಲ್ಲಾ ಲೀಗಲ್ ಸರ್ವಿಸ್ ಅಥೋರಿಟಿ ಅಧಿಕಾರಿಗಳಿಗೆ ಮನವಿ ಸಹಿತ ದೂರು ನೀಡಿದ್ದಾರೆ.
ಅಡೂರು ಸರ್ಕಾರಿ ಶಾಲೆಯ ಹೈಸ್ಕೂಲು ಕನ್ನಡ ವಿಭಾಗದ ಸೋಶಿಯಲ್ ಸಯನ್ಸ್ ವಿಷಯಕ್ಕೆ ಮಲಯಾಳಿ ಶಿಕ್ಷಕಿಯ ನೇಮಕಾತಿಯ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಸೋಮವಾರ ಶಾಲಾ ರಕ್ಷಕ-ಶಿಕ್ಷಕ ಸಂಘ, ಮಾತೃ ರಕ್ಷಕ ಶಿಕ್ಷಕ ಸಂಘ ಹಾಗೂ ಶಾಲಾ ಆಡಳಿತ ಸಮಿತಿಯ ವಿಶೇಷ ಸಭೆ ನಡೆಯಿತು. ಈ ಸಭೆಯಲ್ಲಿ ಕನ್ನಡ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗುವ ನಿಟ್ಟಿನಲ್ಲಿ ಮಲಯಾಳ ಶಿಕ್ಷಕಿಯ ನೇಮಕಾತಿಯನ್ನು ವಿರೋಧಿಸಿ, ಶಿಕ್ಷಕಿಯನ್ನು ನೇಮಕ ಮಾಡದಿರಲು ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು. ಸಭೆಯಲ್ಲಿ ದೇಲಂಪಾಡಿ ಗ್ರಾಮ ಪಂಚಾಯತಿ ಮುಖ್ಯಸ್ಥರು. ಶಾಲಾ ಸಂಘಟನೆಗಳ ಪದಾಧಿಕಾರಿಗಳು, ಮಕ್ಕಳ ಪೋಷಕರು, ಹಳೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಈ ಬಗ್ಗೆ ಶಿಕ್ಷಣ ಇಲಾಖೆಯ ಜಿಲ್ಲಾ ಮುಖ್ಯಸ್ಥರೊಂದಿಗೆ ಚರ್ಚಿಸಲು ನಿಯೋಗವೊಂದು ಸೋಮವಾರವೇ ತೆರಳಿದೆ. ಈ ಬಗ್ಗೆ ಬಾಲಾವಕಾಶ ಕಮಿಷನ್‍ಗೆ ದೂರು ನೀಡಲು ನಿರ್ಧರಿಸಲಾಗಿದೆ. ಮಲಯಾಳ ಶಿಕ್ಷಕಿಯ ನೇಮಕಾತಿಯ ವಿರುದ್ಧ ಹೋರಾಟವನ್ನು ಮುಂದುವರಿಸಲು ಮಕ್ಕಳು ನಿರ್ಧರಿಸಿದ್ದಾರೆ. ಈ ಸಮಸ್ಯೆಯ ನಿವಾರಣೆಗಾಗಿ ಮಾನ್ಯ ಪ್ರಧಾನ ಮಂತ್ರಿಗಳಿಗೆ ದೂರು ನೀಡಲು ಅಡೂರು ಶಾಲೆಯ ಕನ್ನಡ ವಿದ್ಯಾರ್ಥಿಗಳು ನಿರ್ಧರಿಸಿದ್ದಾರೆ.