ವಿಶ್ವ ಕಬಡ್ಡಿಯಲ್ಲಿ ತನ್ನ ಪ್ರಾಬಲ್ಯ ಮುಂದುವರಿಸಿದ ಭಾರತ ತಂಡ 9ನೇ ಆವೃತ್ತಿಯ ಏಶ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಇರಾನ್ ತಂಡವನ್ನು ರೋಚಕವಾಗಿ ಮಣಿಸಿ 8ನೇ ಬಾರಿ ಪ್ರಶಸ್ತಿ ಬಾಚಿಕೊಂಡಿದೆ.
ದಕ್ಷಿಣ ಕೊರಿಯಾದ ಬುಸಾನ್‌ನಲ್ಲಿ ಶುಕ್ರವಾರ ನಡೆದ ಬಹುನಿರೀಕ್ಷಿತ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಭಾರತದ ಪುರುಷರ ಕಬಡ್ಡಿ ತಂಡ ತನ್ನ ಕೌಶಲ್ಯವನ್ನು ಪ್ರದರ್ಶಿಸಿ, ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡು ಇರಾನ್ ತಂಡವನ್ನು 42-32 ಅಂಕಗಳ ಅಂತರದಿಂದ ಸದೆಬಡಿಯಿತು.
ಫೈನಲ್ ಪಂದ್ಯದ ಆರಂಭಿಕ ಹಂತದಲ್ಲಿ ಇರಾನ್ ಮುನ್ನಡೆ ಸಾಧಿಸಿ ಭಾರತೀಯ ತಂಡಕ್ಕೆ ಒತ್ತಡ ಹೇರಿತು. ಭಾರತದ ಡಿಫೆಂಡರ್‌ಗಳು ದಿಟ್ಟವಾಗಿ ಪ್ರತಿ ಹೋರಾಟವನ್ನು ನೀಡಿದ್ದು ನಿರ್ಣಾಯಕ ಪಾಯಿಂಟ್ಸ್ ಪಡೆದರು. ಪವನ್ ಶೆರಾವತ್ ಹಾಗೂ ಅಸ್ಲಮ್ ಇನಾಂದರ್ ಯಶಸ್ವಿ ದಾಳಿಗಳ ಮೂಲಕ ಭಾರತ ಮರು ಹೋರಾಡಲು ನೆರವಾದರು.
ಇರಾನ್ ಮೇಲೆ ನಿರಂತರವಾಗಿ ಒತ್ತಡ ಹೇರಿದ ಭಾರತ ಮತ್ತೊಮ್ಮೆ ಎದುರಾಳಿ ತಂಡವನ್ನು ಆಲೌಟ್ ಮಾಡಿದರು. ಮೊದಲಾರ್ಧದ ಅಂತ್ಯಕ್ಕೆ ಭಾರತವು 23-11 ಮುನ್ನಡೆ ಸಾಧಿಸಿತು. ಈ ಮೂಲಕ ಇರಾನ್ ತಂಡದ ಮೇಲೆ ತೀವ್ರ ಒತ್ತಡ ಹೇರಿತು.
ಹೈವೋಲ್ಟೇಜ್ ಮುಖಾಮುಖಿಯಲ್ಲಿ ಉಭಯ ತಂಡಗಳು ಬದ್ಧತೆ ಹಾಗೂ ಕೌಶಲ್ಯವನ್ನು ಪ್ರದರ್ಶಿಸಿದವು. ಆದರೆ ಭಾರತವು ಫೈನಲ್ ಪಂದ್ಯವನ್ನು 42-32 ಅಂತರದಿಂದ ರೋಚಕವಾಗಿ ಗೆದ್ದುಕೊಂಡು 8ನೇ ಬಾರಿ ಪ್ರಶಸ್ತಿಯನ್ನು ಎತ್ತಿ ಹಿಡಿಯಿತು.
ಟೂರ್ನಮೆಂಟ್‌ನ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಭಾರತವು ಹಾಂಕಾಂಗ್ ತಂಡವನ್ನು 64-20 ಅಂಕಗಳ ಅಂತರದಿಂದ ಮಣಿಸಿತು. ಇದರೊಂದಿಗೆ ಲೀಗ್ ಹಂತದಲ್ಲಿ ಅಜೇಯ ಗೆಲುವಿನ ದಾಖಲೆ ಕಾಯ್ದುಕೊಂಡು ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯಿತು. ಲೀಗ್ ಹಂತದಲ್ಲಿ ಭಾರತ ವಿರುದ್ಧ ಏಕೈಕ ಸೋಲು ಕಂಡಿದ್ದ ಇರಾನ್ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿತ್ತು.
ಏಶ್ಯನ್ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಚಾಂಪಿಯನ್ ಪಟ್ಟಕ್ಕೇರಿರುವ ಭಾರತ ತಂಡ ಮುಂಬರುವ ಸೆಪ್ಟಂಬರ್ 23ರಿಂದ ಅಕ್ಟೋಬರ್ 8ರ ತನಕ ಚೀನಾದ ಆತಿಥ್ಯದಲ್ಲಿ ನಡೆಯುವ ಏಶ್ಯನ್ ಗೇಮ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುವತ್ತ ಚಿತ್ತಹರಿಸಿದೆ. ಭಾರತವು ಏಶ್ಯನ್ ಗೇಮ್ಸ್‌ನಲ್ಲಿ ಪ್ರಶಸ್ತಿಯನ್ನು ವಶಪಡಿಸಿಕೊಂಡು 2018ರಲ್ಲಿ ಜಕಾರ್ತದಲ್ಲಿ ನಡೆದ ಏಶ್ಯನ್ ಗೇಮ್ಸ್ ಸೆಮಿ ಫೈನಲ್‌ನಲ್ಲಿ ಇರಾನ್ ವಿರುದ್ಧ ಸೋತಿರುವುದಕ್ಕೆ ಸೇಡು ತೀರಿಸಿಕೊಳ್ಳುವ ಗುರಿ ಇಟ್ಟುಕೊಂಡಿದೆ.
ಹಾಲಿ ಚಾಂಪಿಯನ್ ಇರಾನ್ ಏಶ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಪ್ರಬಲ ಸವಾಲು ಒಡ್ಡಲು ತಯಾರಾಗಿದೆ.