ನವದೆಹಲಿ: ಮನ್ ಕಿ ಬಾತ್ ರೆಡಿಯೊ ಕಾರ್ಯಕ್ರಮದ102ನೇ ಮಾಸಿಕ ಸಂಚಿಕೆಯಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ತುರ್ತು ಪರಿಸ್ಥಿತಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಮನ್ ಕಿ ಬಾತ್; ಪ್ರಧಾನಿ ಮೋದಿ ಭಾಷಣದ ಮುಖ್ಯಾಂಶಗಳು:
ತುರ್ತು ಪರಿಸ್ಥಿತಿ ದೇಶದ ಇತಿಹಾಸದ ಕರಾಳ ದಿನಗಳು...
ಮಾಜಿ ಪ್ರಧಾನಿ ಇಂದಿರಾಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ದೇಶದ ಇತಿಹಾಸದ ಕರಾಳ ದಿನಗಳು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಭಾರತವು ಪ್ರಜಾಪ್ರಭುತ್ವದ ತಾಯಿ ಆಗಿದ್ದು, ಪ್ರಜಾಸತ್ತಾತ್ಮಕ ಮೌಲ್ಯವನ್ನು ಸರ್ವೋಚ್ಚವಾಗಿ ಪರಿಗಣಿಸುತ್ತೇವೆ. ಆದ್ದರಿಂದ ಇತಿಹಾಸದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಜೂನ್ 25 ದಿನಾಂಕವನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ತುರ್ತು ಪರಿಸ್ಥಿತಿ ವಿರುದ್ಧ ಲಕ್ಷಾಂತರ ಮಂದಿ ಪ್ರತಿಭಟಿಸಿದರು. ಅವರನ್ನು ಹಿಂಸಿಸಲಾಯಿತು. ಇಂದಿಗೂ ಮನಸ್ಸು ನಡುಗುತ್ತಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಈ ಕುರಿತು ನಾವು ಗಮನಹರಿಸಬೇಕು. ಇದು ಯುವ ಪೀಳಿಗೆಗೆ ಪ್ರಜಾಪ್ರಭುತ್ವದ ಮಹತ್ವವನ್ನು ಕಲಿಸುತ್ತದೆ ಎಂದು ಹೇಳಿದ್ದಾರೆ.
ಅಮೆರಿಕದಲ್ಲಿ ಯೋಗ ದಿನಾಚರಣೆ...
ಈ ಬಾರಿ ಅಮೆರಿಕದಲ್ಲಿ ನಡೆಯಲಿರುವ ಯೋಗ ದಿನಾಚರಣೆಯಲ್ಲಿ ಪಾಲ್ಳೊಳ್ಳುವುದಾಗಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಯೋಗವನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಆಳವಡಿಸಿಕೊಳ್ಳಲು ಮತ್ತು ದಿನಚರಿಯ ಭಾಗವನ್ನಾಗಿ ಮಾಡಲು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
'ಮನ್ ಕಿ ಬಾತ್' ನಿಗದಿತ ವೇಳಾಪಟ್ಟಿಗಿಂತಲೂ ಮೊದಲೇ ಪ್ರಸಾರವಾಗಿದ್ದು ಏಕೆ?
ಸಾಮಾನ್ಯವಾಗಿ ತಿಂಗಳ ಕೊನೆಯ ಭಾನುವಾರದಂದು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ನಿಮ್ಮ ಮುಂದೆ ಬರುತ್ತೇನೆ. ಆದರೆ ಈ ಬಾರಿ ಒಂದು ವಾರ ಮುಂಚಿತವಾಗಿ ನಡೆಯುತ್ತಿದೆ. ನಿಮ್ಮಗೆಲ್ಲರಿಗೂ ತಿಳಿದಿರುವಂತೆಯೇ ಮುಂದಿನ ವಾರ ನಾನು ಅಮೆರಿಕದಲ್ಲಿ ಇರುತ್ತೇನೆ. ಬಿಡುವಿಲ್ಲದ ವೇಳಾಪಟ್ಟಿ ನಿಗದಿಯಾಗಿದೆ. ಹಾಗಾಗಿ ಜನರ ಆಶೀರ್ವಾದ ಪಡೆಯುವುದಕ್ಕಿಂತ ಮಿಗಿಲಾಗಿ ಬೇರೆ ಏನಿದೆ ಎಂದು ಮನ್ ಕಿ ಬಾತ್ ಒಂದು ವಾರ ಬೇಗನೆ ಪ್ರಸಾರ ಆಗಿರುವ ಕುರಿತಾಗಿ ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದಾರೆ.
ಬಿಪೊರ್‌ಜಾಯ್ ಚಂಡಮಾರುತ ನಿರ್ವಹಣೆ; ಪ್ರಧಾನಿ ಮೋದಿ ಮೆಚ್ಚುಗೆ
ಬಿಪೊರ್‌ಜಾಯ್ ಚಂಡಮಾರುತದಿಂದಾಗಿ ಸಂಕಷ್ಟ ಅನುಭವಿಸಿದ ಜನರು ಶೀಘ್ರದಲ್ಲೇ ಸಹಜ ಜೀವನಕ್ಕೆ ಮರಳಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲವು ವರ್ಷಗಳಲ್ಲಿ ವಿಪತ್ತು ನಿರ್ವಹಣೆಯ ಸಾಮರ್ಥ್ಯವನ್ನು ಭಾರತ ಗಣನೀಯವಾಗಿ ಅಭಿವೃದ್ಧಿಪಡಿಸಿದೆ. ಬಿಪೊರ್‌ಜಾಯ್ ಚಂಡಮಾರುತ ನಿರ್ವಹಣೆ ಇದಕ್ಕೊಂದು ಉದಾಹರಣೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.