ಉಪ್ಪಳ: ಗಡಿನಾಡಿನ ಖ್ಯಾತ ಸಾಮಾಜಿಕ ಹಾಗೂ ಸಾಂಸ್ಕøತಿಕ ಸಂಘಟನೆ ರಂಗ ಚಿನ್ನಾರಿ ಕಾಸರಗೋಡು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ಜಿಲ್ಲೆಯ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ನಡೆಸುವ ಕಾಸರಗೋಡು ಕನ್ನಡ ಹಬ್ಬ ಸಪ್ತಾಹದ ಐದನೇ ದಿನದ ಕಾರ್ಯಕ್ರಮ ಐಲ ಶ್ರೀ ದುರ್ಗಾಪರಮೇಶ್ವರಿ ಕಲಾಭವನದಲ್ಲಿ ತರುಣಕಲಾ ವೃಂದ ಐಲ ಸಂಘಟನೆಯ ಪ್ರಾಯೋಜಕತ್ವದಲ್ಲಿ ಇತ್ತೀಚೆಗೆ ಜರಗಿತು.
ಐಲ ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ನ್ಯಾಯವಾದಿ. ಕೋಡಿಬೈಲು ನಾರಾಯಣ ಹೆಗ್ಡೆ ದೀಪಬೆಳಗಿಸಿ ಹಬ್ಬವನ್ನು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಕಾಸರಗೋಡಿನಲ್ಲಿ ಕನ್ನಡದ ಅಸ್ಮಿತೆಯನ್ನು ಉಳಿಸುವಲ್ಲಿ ಇಂತಹ ಕನ್ನಡ ಹಬ್ಬಗಳ ಅಗತ್ಯ ಹಿಂದಿಗಿಂತ ಇಂದು ಅಧಿಕವಾಗಿದೆ. ಕಾಸರಗೋಡಿನ ಕನ್ನಡಿಗರು ತಮ್ಮ ಭಾಷೆ ಸಂಸ್ಕøತಿಯನ್ನು ಉಳಿಸುವಲ್ಲಿ ನಿತ್ಯ ಸಮರ್ಪಣಾಭಾವದಿಂದ ಕನ್ನಡದ ಕೆಲಸವನ್ನು ಮಾಡಬೇಕಿದೆ. ಕಾಸರಗೋಡು ಚಿನ್ನಾರ ನೇತೃತ್ವದ ರಂಗಚಿನ್ನಾರಿ ಕಳೆದ ಎರಡು ದಶಕಗಳಿಂದ ನಡೆಸುತ್ತಾ ಬಂದಿರುವ ಕನ್ನಡದ ಸೇವೆ ಎಲ್ಲವರಿಗೂ ಅನುಕರಣೀಯ ಎಂದರು.
ರಂಗಚಿನ್ನಾರಿಯ ನಿರ್ದೇಶಕ ಕಾಸರಗೋಡು ಚಿನ್ನಾ ಪ್ರಾಸ್ತಾವಿಕ ನುಡಿಗಳನ್ನಾಡಿ ಕಾಸರಗೋಡು ಕನ್ನಡ ಹಬ್ಬದ ದ್ಯೇಯೋದ್ದೇಶವನ್ನು ತಿಳಿಸಿ ರಂಗ ಚಿನ್ನಾರಿಯ ಚಟುವಟಿಕೆಗಳನ್ನು ಮಾಹಿತಿ ನೀಡಿದರು.
ಹರಿಕಥಾ ಕಲಾವಿದೆ ಮಂಜುಳಾ ಜಿ. ರಾವ್ ಇರಾ, ಹಿರಿಯ ಸಿನಿಮಾ ಪತ್ರಕರ್ತ ಗಣೇಶ ಕಾಸರಗೋಡು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಮಂಗಲ್ಪಾಡಿ ಗ್ರಾಮ ಪಂಚಾಯತಿ ಸದಸ್ಯ ಕಿಶೋರ್ ಬಂದ್ಯೋಡು ಅಧ್ಯಕ್ಷತೆ ವಹಿಸಿದ್ದ ಸಭಾ ಕಾರ್ಯಕ್ರಮದಲ್ಲಿ ರಂಗಚಿನ್ನಾರಿ ನಿರ್ದೇಶಕ ಕಾಸರಗೋಡು ಚಿನ್ನಾ ಹಾಗೂ ಸತ್ಯನಾರಾಯಣ ಕೆ, ಕೋಳಾರು ಸತೀಶ್ಚಂದ್ರ ಭಂಡಾರಿ ಉಪಸ್ಥಿತರಿದ್ದರು.
ತರುಣಕಲಾ ವೃಂದ ಐಲ ಸಂಸ್ಥೆಯ ಅಧ್ಯಕ್ಷ ಮೋಹನ್ ದಾಸ್ ಐಲ ಸ್ವಾಗತಿಸಿ, ಕಮಲಾಕ್ಷ ಐಲ ನಿರೂಪಿಸಿ, ತರುಣಕಲಾ ವೃಂದದ ಕಾರ್ಯದರ್ಶಿ ಉದಯಕುಮಾರ್ ಐಲ ವಂದನಾರ್ಪಣೆಗೈದರು. ಸಮಾರಂಭದಲ್ಲಿ ಉದಯೋನ್ಮುಕ ಗಾಯಕ ಕಿಶೋರ್ ಪೆರ್ಲ ಅವರನ್ನು ಗಣ್ಯರ ಸಮಕ್ಷಮ ಗೌರವಿಸಲಾಯಿತು.
ಬಳಿಕ ರಸಿಕರತ್ನ ವಿಟ್ಲ ಜೋಷಿ ಪ್ರತಿಷ್ಠಾನದ ಶಿಲ್ಪಾ ಜೋಷಿಯವರಿಂದ “ನನ್ನೊಳಗಿನ ಅವಳು” ಏಕ ವ್ಯಕ್ತಿ ನಾಟಕ ಹಾಗೂ ಉಪೇಂದ್ರ ಮಲ್ಯ ಹಾಗೂ ಬಳಗದವರಿಂದ ಭರತನಾಟ್ಯ ಕಾರ್ಯಕ್ರಮ ನೆರೆದಿದ್ದ ಜನಸ್ತೋಮವನ್ನು ರಂಜಿಸಿತು.