ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್ ಭೇಟಿ ಬಳಿಕ ಇತ್ತೀಚಗೆ, ಭಯೋತ್ಪಾದನೆ ಕೃತ್ಯಗಳನ್ನು ಹತ್ತಿಕ್ಕುವ ಕುರಿತಂತೆ ನೀಡಿದ್ದ ಜಂಟಿ ಹೇಳಿಕೆಗೆ ಪಾಕಿಸ್ತಾನ ಸರ್ಕಾರ ವ್ಯಕ್ತಪಡಿಸಿದ್ದ ಆಕ್ಷೇಪವನ್ನು ಅಮೆರಿಕ ತಳ್ಳಿಹಾಕಿದೆ.

ಅಲ್ಲದೆ, ಗಡಿಯಾಚೆಗೆ ಭಯೋತ್ಪಾದನೆ ಕೃತ್ಯಗಳಿಗೆ ಉತ್ತೇಜನ ನೀಡುವುದನ್ನು ನಿಲ್ಲಿಸಬೇಕು ಹಾಗೂ ತನ್ನ ನೆಲದಲ್ಲಿರುವ ಎಲ್ಲ ಭಯೋತ್ಪಾದಕ ಸಂಘಟನೆಗಳನ್ನು ಶಾಶ್ವತವಾಗಿ ನಿಷ್ಕ್ರಿಯಗೊಳಿಸಬೇಕು ಎಂದೂ ಪಾಕಿಸ್ತಾನಕ್ಕೆ ಸಲಹೆ ಮಾಡಿದೆ.
ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್ ಅವರು, 'ಭಯೋತ್ಪಾದಕ ಸಂಘಟನೆಗಳಿಂದ ಈ ವಲಯದಲ್ಲಿ ಇರುವ ಬೆದರಿಕೆ ತಡೆಗೆ ಪಾಕಿಸ್ತಾನದ ಜೊತೆಗೂಡಿ ಕೆಲಸ ಮಾಡಲು ಜೋ ಬೈಡನ್ ಸರ್ಕಾರ ಬದ್ಧವಾಗಿದೆ' ಎಂದು ಹೇಳಿದರು.
'ಇದೇ ಸಂದರ್ಭದಲ್ಲಿ ತನ್ನ ನೆಲದಲ್ಲಿ ಸಕ್ರಿಯವಾಗಿರುವ ಲಷ್ಕರ್ ಎ ತಯಬಾ, ಜೈಷ್ ಎ ಮೊಹಮ್ಮದ್ ಮತ್ತು ಇತರ ಉಗ್ರ ಸಂಘಟನೆಗಳನ್ನು ಶಾಶ್ವತವಾಗಿ ನಿಷ್ಕ್ರಿಯಗೊಳಿಸಲು ಪಾಕಿಸ್ತಾನ ಸರ್ಕಾರವು ಕೈಗೊಂಡಿರುವ ಕ್ರಮಗಳಿಗೂ ಪ್ರಾಮುಖ್ಯತೆ ನೀಡಲಿದೆ. ಈ ಸಂಬಂಧ ಅಮೆರಿಕವು ಪಾಕಿಸ್ತಾನದ ಜೊತೆಗೆ ನಿರಂತರವಾಗಿ ಚರ್ಚಿಸಲಿದೆ' ಎಂದೂ ಹೇಳಿದರು.
ಜಂಟಿ ಹೇಳಿಕೆ ಬಿಡುಗಡೆ ಮಾಡಿದ ಹಿಂದೆಯೇ ಪಾಕಿಸ್ತಾನದ ಸರ್ಕಾರವು, 'ಅಮೆರಿಕದ ಉಪ ರಾಯಭಾರಿಯನ್ನು ಕರೆಸಿ ತನ್ನ ಆಕ್ಷೇಪವನ್ನು ದಾಖಲಿಸಿತ್ತು. ಜಂಟಿ ಹೇಳಿಕೆಯು ಅನಪೇಕ್ಷಿತವಾಗಿದ್ದು, ಏಕಪಕ್ಷೀಯವಾಗಿದೆ' ಎಂದು ಪಾಕಿಸ್ತಾನ ಅಭಿಪ್ರಾಯಪಟ್ಟಿತು.