ನವದೆಹಲಿ: 'ರೋಜ್‌ಗಾರ್ ಮೇಳವು ಬಿಜೆಪಿ ಸರ್ಕಾರದ ಹೊಸ ಹೆಗ್ಗುರುತಾಗಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.
ಸರ್ಕಾರದ ವಿವಿಧ ಇಲಾಖೆಗಳಿಗೆ ಆಯ್ಕೆಯಾಗಿರುವ 70 ಸಾವಿರ ಮಂದಿಗೆ ಮಂಗಳವಾರ ನೇಮಕಾತಿ ಪತ್ರಗಳನ್ನು ವಿತರಿಸಿ ಮಾತನಾಡಿದ ಅವರು, ಸರ್ಕಾರವು ಮೇಳದ ಮೂಲಕ ಯುವಜನರ ಭವಿಷ್ಯವನ್ನು ಉಜ್ವಲಗೊಳಿಸಲು ಮುಂದಾಗಿದೆ ಎಂದು ಪ್ರತಿಪಾದಿಸಿದರು.
ದೇಶದಲ್ಲಿ ವಂಶಪಾರಂಪರ್ಯ ಆಡಳಿತ ನಡೆಸಿದ ರಾಜಕೀಯ ಪಕ್ಷಗಳು ಸರ್ಕಾರಿ ನೇಮಕಾತಿಗಳಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರಕ್ಕೆ ಒತ್ತು ನೀಡಿವೆ. ವಿವಿಧ ಹುದ್ದೆಗಳಿಗೆ ದರ ಪಟ್ಟಿ ನಿಗದಿಪಡಿಸಿ, ಹಣವನ್ನು ಲೂಟಿ ಮಾಡಿವೆ. ಸರ್ಕಾರಿ ಹುದ್ದೆಯ ನಿರೀಕ್ಷೆಯಲ್ಲಿದ್ದ ಕೋಟ್ಯಂತರ ಯುವಜನರಿಗೆ ದ್ರೋಹ ಬಗೆದಿವೆ ಎಂದು ಟೀಕಿಸಿದರು.
ಹಿಂದೆ ನೇಮಕಾತಿ ಪ್ರಕ್ರಿಯೆಯು ಒಂದೂವರೆ ವರ್ಷ ಕಳೆದರೂ ಮುಗಿಯುತ್ತಿರಲಿಲ್ಲ. ಈಗ ಕೆಲವೇ ತಿಂಗಳಿನಲ್ಲಿ ಪೂರ್ಣಗೊಳ್ಳುತ್ತಿದೆ. 2014ರ ಬಳಿಕ ನೇಮಕಾತಿಯಲ್ಲಿ ಪಾರದರ್ಶಕತೆ ತರಲಾಗಿದೆ. ಹಾಗಾಗಿ, ಸ್ವಜನಪಕ್ಷಪಾತಕ್ಕೆ ಅವಕಾಶ ಇಲ್ಲದಂತಾಗಿದೆ ಎಂದರು.
ರಾಜಕೀಯ ಭ್ರಷ್ಟಾಚಾರ, ಸರ್ಕಾರಿ ಯೋಜನೆಗಳಲ್ಲಿ ಸೋರಿಕೆ, ಸಾರ್ವಜನಿಕ ಹಣದ ದುರ್ಬಳಕೆಯೇ ಈ ಹಿಂದೆ ಆಡಳಿತ ನಡೆಸಿದ ಸರ್ಕಾರಗಳ ದೊಡ್ಡ ಸಾಧನೆಯಾಗಿದೆ ಎಂದು ವ್ಯಂಗ್ಯವಾಡಿದರು.
ಪ್ರಚಾರದ ಗಿಮಿಕ್: ಕಾಂಗ್ರೆಸ್ ಟೀಕೆ
ಪ್ರಧಾನಿ ಹೇಳಿಕೆಗೆ ಕಾಂಗ್ರೆಸ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, 'ದೇಶದ ವಿವಿಧ ವಲಯಗಳಲ್ಲಿ ಉದ್ಯೋಗ ನಾಶಪಡಿಸಿದವರೇ ಈಗ ಮೇಳ ಆಯೋಜಿಸುತ್ತಿರುವುದು ತಮಾಷೆಯ ಸಂಗತಿ. ಇದು ಬಿಜೆಪಿಯ ಅಸ್ತಿತ್ವಕ್ಕಾಗಿ ಪ್ರಧಾನಿ ಮೋದಿ ನಡೆಸುತ್ತಿರುವ ಪ್ರಚಾರದ ಗಿಮಿಕ್ ಆಗಿದೆ ಎಂದು ಟೀಕಾಪ್ರಹಾರ ನಡೆಸಿದೆ.
'ಮೇಳದ ಮೂಲಕ ಹೊಸ ಉದ್ಯೋಗ ಸೃಷ್ಟಿಸುತ್ತಿಲ್ಲ ಎಂಬುದು ಅರಿವಾಗಿದೆ. ಇದು ಸರ್ಕಾರದ ಅಸ್ತಿತ್ವವನ್ನು ಸಾಬೀತುಪಡಿಸುವ ಪ್ರಯತ್ನವಾಗಿದೆ. ಈಗಾಗಲೇ ಆಯ್ಕೆಯಾಗಿರುವ ಸಂಭಾವ್ಯ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡುವ ಪ್ರಕ್ರಿಯೆ ನಡೆಯುತ್ತಿದೆ ಅಷ್ಟೇ' ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಟ್ವೀಟ್ ಮೂಲಕ ವ್ಯಂಗ್ಯವಾಡಿದ್ದಾರೆ.
ಒಂಬತ್ತು ವರ್ಷಗಳ ಅಧಿಕಾರ ಅವಧಿಯಲ್ಲಿ ಹೊಸ ಉದ್ಯೋಗಗಳನ್ನು ಸೃಷ್ಟಿಸುವಲ್ಲಿ ಮೋದಿ ಸಂಪೂರ್ಣ ವಿಫಲರಾಗಿದ್ದಾರೆ. ಮತ್ತೊಂದೆಡೆ ಸಾರ್ವಜನಿಕ ವಲಯಗಳಲ್ಲಿನ ಉದ್ಯೋಗಗಳನ್ನು ಕಡಿತಗೊಳಿಸಿದ್ದಾರೆ ಎಂದು ಟೀಕಿಸಿದ್ದಾರೆ.
ದೇಶದ ಕೆಲವು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಅರ್ಹರಿಗೆ ನೇಮಕಾತಿ ಪತ್ರ ನೀಡುತ್ತವೆ. ಇದನ್ನೂ ಕೇಂದ್ರ ಸರ್ಕಾರ ಸೃಷ್ಟಿಸಿರುವ ಉದ್ಯೋಗಗಳೆಂದು ಬಿಂಬಿಸಲಾಗುತ್ತಿದೆ. ಇದರ ಮೇಲೂ ಸ್ವಯಂಘೋಷಿತ ವಿಶ್ವಗುರುವಿನ ಪ್ರಭಾವವಿದೆ ಎಂದು ಲೇವಡಿ ಮಾಡಿದ್ದಾರೆ