ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಪದವಿ ಪಡೆದಿರುವ ಕುರಿತು ಮಾಹಿತಿ ನೀಡುವಂತೆ ಕೇಂದ್ರೀಯ ಮಾಹಿತಿ ಆಯೋಗ (ಸಿಐಸಿ) ನೀಡಿದ್ದ ಆದೇಶವನ್ನು ರದ್ದುಪಡಿಸಿ, ತಮಗೆ ₹25,000 ದಂಡ ವಿಧಿಸಿರುವ ತೀರ್ಪನ್ನು ಮರುಪರಿಶೀಲಿಸಬೇಕೆಂದು ಕೋರಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಗುಜರಾತ್ ಹೈಕೋರ್ಟ್ ಮೊರೆ ಹೋಗಿದ್ದಾರೆ.
ದಾಖಲೆಗಳಲ್ಲಿ ದೋಷಗಳಿರುವುದರಿಂದ ಮಾರ್ಚ್ 31ರಂದು ನೀಡಿರುವ ತೀರ್ಪಿಗೆ ತಡೆ ನೀಡಬೇಕೆಂದು ಕೋರಿ ಕೇಜ್ರಿವಾಲ್ ಅವರು ಅರ್ಜಿ ಸಲ್ಲಿಸಿದ್ದಾರೆ.
ನ್ಯಾಯಮೂರ್ತಿ ಬಿರೇನ್ ವೈಷ್ಣವ್ ಅವರಿದ್ದ ಏಕಸದಸ್ಯ ನ್ಯಾಯಪೀಠವು ಕೇಜ್ರಿವಾಲ್ ಅವರ ಅರ್ಜಿಯನ್ನು ಪುರಸ್ಕರಿಸಿದ್ದು, ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡಿದೆ.
'ಪ್ರಧಾನಿ ಅವರ ಪದವಿಯ ಕುರಿತು ಮಾಹಿತಿ ನೀಡುವಂತೆ ನಾನು ಅರ್ಜಿ ಸಲ್ಲಿಸಿರಲಿಲ್ಲ. ಸಿಐಸಿ ಸ್ವಯಂ ಪ್ರೇರಿತವಾಗಿ ಈ ವಿಷಯವನ್ನು ಕೈಗೆತ್ತಿಕೊಂಡಿದೆ, ದಾಖಲೆಗಳಲ್ಲಿನ ದೋಷಗಳಿಂದ ನನಗೆ ದಂಡ ವಿಧಿಸಲಾಗಿದೆ ಈ ಕಾರಣಕ್ಕೆ ತೀರ್ಪನ್ನು ಮರು ಪರಿಶೀಲಿಸಬೇಕು' ಎಂದು ಕೇಜ್ರಿವಾಲ್ ಅವರು ಅರ್ಜಿಯಲ್ಲಿ ಕೋರಿದ್ದಾರೆ.
ಮೋದಿ ಅವರ ಪದವಿ ಕುರಿತ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ಗುಜರಾತ್ ವಿಶ್ವವಿದ್ಯಾಲಯ ಹೇಳಿರುವುದನ್ನೂ ಕೇಜ್ರಿವಾಲ್ ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಮೋದಿ ಅವರ ಶೈಕ್ಷಣಿಕ ಮಾಹಿತಿಯನ್ನು ಆರ್‌ಟಿಐ ಮೂಲಕ ಕೋರಿದ್ದಕ್ಕಾಗಿ ನ್ಯಾಯಮೂರ್ತಿ ಬಿರೇನ್ ವೈಷ್ಣವ್ ಅವರು ಮಾರ್ಚ್ 31ರಂದು ಕೇಜ್ರಿವಾಲ್ ಅವರಿಗೆ ₹25,000ದಂಡ ವಿಧಿಸಿದ್ದರು.