ನವದೆಹಲಿ (PTI): ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು 'ನಾಥುರಾಂ ಗೋಡ್ಸೆ ಭಾರತದ ಸುಪುತ್ರ' ಎಂದು ನೀಡಿರುವ ಹೇಳಿಕೆಯನ್ನು ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಶನಿವಾರ ಟೀಕಿಸಿದ್ದಾರೆ. 'ಈ ಹೇಳಿಕೆ ನೀಡಿದ್ದಾರೆ ಎಂಬ ಕಾರಣಕ್ಕೆ ಹಲವರು ಈ ಬಿಜೆಪಿ ನಾಯಕನನ್ನು ದೇಶದ ಸುಪುತ್ರ ಎಂದು ಕರೆಯಲಾರರು' ಎಂದಿದ್ದಾರೆ.
ಛತ್ತೀಸಗಢದ ದಾಂತೇವಾಡದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಗಿರಿರಾಜ್ ಸಿಂಗ್, 'ಗೋಡ್ಸೆ, ಮಹಾತ್ಮ ಗಾಂಧಿ ಅವರನ್ನು ಹತ್ಯೆ ಮಾಡಿದ್ದರೂ ಆತ ಮೊಘಲ್ ದೊರೆಗಳಾದ ಬಾಬರ್ ಮತ್ತು ಔರಂಗಜೇಬರಂತೆ ಹೊರಗಿನಿಂದ ಬಂದ ವ್ಯಕ್ತಿಯಲ್ಲ. ಈ ದೇಶದ ಸುಪುತ್ರ' ಎಂದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಸಿಬಲ್, 'ಹಂತಕರನ್ನು ಅವರ ಹುಟ್ಟಿನಿಂದ ಗುರುತಿಸಲಾಗದು. ಗಿರಿರಾಜ್ ಅವರ ಈ ಹೇಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಖಂಡಿಸುವ ವಿಶ್ವಾಸ ಇದೆ' ಎಂದು ಹೇಳಿದ್ದಾರೆ.