ಕಾಸರಗೋಡು: ಹೃದಯಾಘಾತದಿಂದ ಇತ್ತೀಚೆಗೆ ನಿಧನರಾಗಿರುವ ಪೆರ್ಲ ಸನಿಹದ ಕುದ್ವ ಸೆಟ್ಟಿಬೈಲ್ ನಿವಾಸಿ, ಆಟೋರಿಕ್ಷಾ ಚಾಲಕ ಗೋಪಾಲ(30)ಅವರ ಕುಟುಂಬದ ನೆರವಿಗಾಗಿ ಆಟೋರಿಕ್ಷಾ ಚಾಲಕರು ಬುಧವಾರ ನಡೆಸಿದ'ಕಾರುಣ್ಯ ಯಾತ್ರೆ'ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ತಮ್ಮ ಒಂದು ದಿನದ ದುಡಿಮೆಯ ಆದಾಯವನ್ನು ಆಟೋ ಚಾಲಕರು ಗೋಪಾಲ ಅವರ ಬಡ ಕುಟುಂಬಕ್ಕೆ ನೀಡುವ ನಿಟ್ಟಿನಲ್ಲಿ ಪೆರ್ಲ, ಉಕ್ಕಿನಡ್ಕ ಹಾಗೂ ಅಡ್ಕಸ್ಥಳದ ಆಟೋ ಚಾಲಕರು ಒಟ್ಟಾಗಿ ಈ ಕಾರುಣ್ಯ ಯಾತ್ರೆ ನಡೆಸಿದ್ದರು. ಈ ಮೂಲಕ ಒಂದು ಲಕ್ಷಕ್ಕೂ ಹೆಚ್ಚು ಮೊತ್ತ ಸಂಗ್ರಹಿಸಲಾಗಿದ್ದು, ಇದನ್ನು ಗೋಪಾಲ ಅವರ ಕುಟುಂಬಕ್ಕೆ ಹಸ್ತಾಂತರಿಸಲು ಆಟೋಚಾಲಕರು ತೀರ್ಮನಿಸಿದ್ದಾರೆ. ಪೆರ್ಲ ಪೇಟೆಯಲ್ಲಿ ನಡೆದ ಸಮರಂಭದಲ್ಲಿ ಖ್ಯಾತ ವೈದ್ಯ ಡಾ. ಶ್ರೀಪತಿ ಕಜಂಪಾಡಿ ಕಾರುಣ್ಯ ಯಾತ್ರೆಗೆ ಚಾಲನೆ ನೀಡಿ, ಸಮಾಜದಲ್ಲಿ ಸಂಕಷ್ಟದಲ್ಲಿರುವವರಿಗೆ ನೆರವಾಗುವುದು ನಿಜವಾದ ಸೇವೆಯಾಗಿದೆ. ಆಟೋ ಚಾಲಕರ ಜನಪರ ಕಾಳಜಿ ಶ್ಲಾಘನೀಯ ಹಾಗೂ ಸಮಾಜಕ್ಕೆ ದರ್ಶಪ್ರಾಯವಾದುದು ಎಂದು ತಿಳಿಸಿದರು.
ವೃದ್ಧ ತಾಯಿ, ಪತ್ನಿ, ಇಬ್ಬರು ಎಳೆಯ ಮಕ್ಕಳನ್ನು ಹೊಂದಿರುವ ಬಡ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ಗೋಪಾಲ ಅವರು ಇತ್ತೀಚೆಗೆ ಹೃದಯಾಘಾತದಿಂದ ನಿಧನರಾಗಿದ್ದರು. ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.