ಕಣ್ಣೂರು: ಕಾಡಾನೆಯೊಂದು ರಸ್ತೆಯಲ್ಲೇ ಮರಿಗೆ ಜನ್ಮ ನೀಡಿರುವ ಘಟನೆ ಕಣ್ಣೂರು ಜಿಲ್ಲೆಯ ಅರಳಂ ಎಂಬಲ್ಲಿ ಜೂನ್ 7ರಂದು ನಡೆದಿದೆ. ಘಟನೆಯ ದೃಶ್ಯ ವಾಹನ ಸವಾರರ ಮೊಬೈಲ್ನಲ್ಲಿ ಸೆರೆಯಾಗಿದ್ದು, ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಹೆರಿಗೆಯ ನಂತರ ಆನೆ ಮತ್ತು ಅದರ ಮರಿ ಕೆಲ ಗಂಟೆಗಳ ಕಾಲ ರಸ್ತೆಯಲ್ಲಿ ಕಳೆದಿವೆ. ಬಳಿಕ ಮರಿಯೊಂದಿಗೆ ಆನೆ ಅರಳಂ ಫಾರ್ಮ್ ಬಳಿಯ ಕಾಡಿಗೆ ತೆರಳಿದೆ. ತಾಯಿ ಆನೆಯ ರಕ್ಷಣೆಗೆ ಇತರೆ ಕಾಡಾನೆಗಳು ಧಾವಿಸಿದ್ದವು ಎಂದು ಪ್ರತ್ಯಕ್ಷದರ್ಶಿಗಳು ಹೇಳಿರುವುದು ವರದಿಯಾಗಿದೆ. ಸುಮಾರು 50ಕ್ಕೂ ಹೆಚ್ಚು ಕಾಡಾನೆಗಳು ರಸ್ತೆಯಲ್ಲೇ ಬೀಡು ಬಿಟ್ಟಿದ್ದರಿಂದ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ.
ಕಾಡಾನೆ ರಸ್ತೆಯಲ್ಲೇ ಮರಿಗೆ ಜನ್ಮ ನೀಡಿದ ನಂತರ ರಕ್ಷಣೆಯ ಕಾರಣದಿಂದ ಕೀಜ್ಪಲ್ಲಿ - ಪಲ್ಪುಜಾ ನಡುವಿನ ರಸ್ತೆಯಲ್ಲಿ ಸಂಚಾರ ನಿಷೇಧಿಸಲಾಗಿದೆ. ತಾಯಿ ಆನೆ ಮತ್ತು ಮರಿ ಸುರಕ್ಷಿತವಾಗಿದ್ದು, ಅರಣ್ಯ ಇಲಾಖೆಯ ಕಣ್ಗಾವಲಿನಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.