ನವದೆಹಲಿ: ಆಂಧ್ರಪ್ರದೇಶದಲ್ಲಿ ಜಾರಿಗೊಳಿಸಿರುವ 'ಖಾತರಿ ಪಿಂಚಣಿ ಯೋಜನೆ'ಯನ್ನು (ಹೈಬ್ರಿಡ್ ಪಿಂಚಣಿ ಯೋಜನೆ) ರಾಜ್ಯಗಳು ಅಳವಡಿಸಿಕೊಳ್ಳಲು ಅನುಮತಿ ನೀಡಬೇಕು ಎಂದು ಕೇಂದ್ರ ಸರ್ಕಾರ ರಚಿಸಿರುವ ಸಮಿತಿಯು ಶಿಫಾರಸು ಮಾಡುವ ಸಾಧ್ಯತೆ ಇದೆ.
ಹಳೆ ಪಿಂಚಣಿ ಯೋಜನೆ (ಒಪಿಎಸ್) ಮತ್ತು ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್)ಯಲ್ಲಿನ ವೈಶಿಷ್ಟ್ಯಗಳನ್ನು ಈ 'ಹೈಬ್ರಿಡ್ ಪಿಂಚಣಿ ಯೋಜನೆ' ಹೊಂದಿರುವ ಕಾರಣ ಸಮಿತಿಯು ಇಂಥ ಶಿಫಾರಸು ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಹಣಕಾಸು ಕಾರ್ಯದರ್ಶಿ ಟಿ.ವಿ.ಸೋಮನಾಥನ್ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಕಳೆದ ಏಪ್ರಿಲ್‌ನಲ್ಲಿ ಸಮಿತಿ ರಚಿಸಿದೆ. ವಿರೋಧ ಪಕ್ಷಗಳ ಆಡಳಿತವಿರುವ ಹಲವು ರಾಜ್ಯಗಳಲ್ಲಿ ಹಳೆ ಪಿಂಚಣಿ ಯೋಜನೆಯನ್ನು ಪುನಃ ಜಾರಿಗೊಳಿಸಲಾಗಿದೆ. ಹಳೆ ಪಿಂಚಣಿ ಯೋಜನೆಯನ್ನೇ ಜಾರಿಗೊಳಿಸಬೇಕು ಎಂದು ಇತರ ರಾಜ್ಯಗಳಲ್ಲಿನ ನೌಕರರ ಸಂಘಗಳು ಆಗ್ರಹಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿತ್ತು.
'ವರದಿ ಸಲ್ಲಿಸಲು ಯಾವುದೇ ಗಡುವು ನಿಗದಿ ಮಾಡಿಲ್ಲ. ಸಮಿತಿಯು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಜುಲೈನಲ್ಲಿ ವರದಿ ಸಲ್ಲಿಸುವ ಸಾಧ್ಯತೆ ಇದೆ' ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಹೈಬ್ರಿಡ್ ಪಿಂಚಣಿ ಯೋಜನೆ ಕುರಿತು ಕೂಲಂಕಷ ಪರಿಶೀಲನೆ ಮಾಡುತ್ತಿದ್ದೇವೆ. ಕೆಲವು ಸಭೆಗಳೂ ನಡೆದಿವೆ. ಒಪಿಎಸ್ ಹಾಗೂ ಎನ್‌ಪಿಎಸ್‌ನಲ್ಲಿರುವ ಉತ್ತಮ ಅಂಶಗಳನ್ನು ಒಳಗೊಂಡ ಪಿಂಚಣಿ ಯೋಜನೆಯನ್ನು ಶಿಫಾರಸು ಮಾಡುವ ಸಾಧ್ಯತೆ ಇದೆ' ಎಂದು ಅಧಿಕಾರಿ ತಿಳಿಸಿದ್ದಾರೆ.
'ಹಳೆ ಪಿಂಚಣಿ ಯೋಜನೆಯು ರಾಜ್ಯಗಳ ಯೋಜನಾ ಗಾತ್ರವನ್ನು ಹೆಚ್ಚಿಸುತ್ತದೆ. ಇದು ರಾಜ್ಯಗಳ ಆರ್ಥಿಕ ಸ್ಥಿತಿ ಮೇಲೆ ಪರಿಣಾಮ ಬೀರುತ್ತದೆ ಎಂಬುದೇ ಕೇಂದ್ರದ ಆತಂಕ' ಎಂದು ಅಧಿಕಾರಿ ಹೇಳಿದ್ದಾರೆ.
'ಖಾತರಿ ಪಿಂಚಣಿ ಯೋಜನೆ': ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್‌ಮೋಹನ್ ರೆಡ್ಡಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯು 'ಖಾತರಿ ಪಿಂಚಣಿ ಯೋಜನೆ'ಗೆ ಕಳೆದ ವಾರ ಅನುಮೋದನೆ ನೀಡಿದೆ.
ಒಪಿಎಸ್ ಮತ್ತು ಎನ್‌ಪಿಎಸ್‌ನ ಅಂಶಗಳನ್ನು ಈ ಯೋಜನೆ ಒಳಗೊಂಡಿದೆ. ಯಾವುದೇ ಕಡಿತಗಳು ಇಲ್ಲದೆಯೇ, ರಾಜ್ಯ ಸರ್ಕಾರಿ ನೌಕರನು ಕೊನೆಯ ಮೂಲವೇತನದ ಶೇ 50ರಷ್ಟು ಮೊತ್ತ ಪಿಂಚಣಿಯಾಗಿ ಸಿಗುವ ಖಾತರಿಯನ್ನು ಈ ಯೋಜನೆ ನೀಡುತ್ತದೆ.
ಈ ಪಿಂಚಣಿ ಪಡೆಯಲು ನೌಕರರು ಪ್ರತಿತಿಂಗಳು ತಮ್ಮ ಮೂಲವೇತನದ ಶೇ 10ರಷ್ಟು ಮೊತ್ತವನ್ನು ನೀಡಬೇಕು. ಅದಕ್ಕೆ ತಕ್ಕಷ್ಟು ಮೊತ್ತವನ್ನು ರಾಜ್ಯ ಸರ್ಕಾರ ಭರಿಸುತ್ತದೆ.
ಹಳೆ ಪಿಂಚಣಿ ಯೋಜನೆಯನ್ನು ಮತ್ತೆ ಜಾರಿಗೊಳಿಸುವುದಾಗಿ ರಾಜಸ್ಥಾನ, ಛತ್ತೀಸಗಢ, ಜಾರ್ಖಂಡ, ಪಂಜಾಬ್ ಹಾಗೂ ಹಿಮಾಚಲಪ್ರದೇಶ ಸರ್ಕಾರಗಳು ಈಗಾಗಲೇ ಕೇಂದ್ರಕ್ಕೆ ತಿಳಿಸಿವೆ. ಎನ್‌ಪಿಎಸ್ ಅಡಿ ಸಂಗ್ರಹಗೊಂಡಿರುವ ನಿಧಿಯನ್ನು ಮರಳಿಸುವಂತೆಯೂ ಮನವಿ ಮಾಡಿವೆ.