ತಿರುವನಂತಪುರಂ: ಕಳಿಂಗ ವಿಶ್ವವಿದ್ಯಾಲಯದ ನಕಲಿ ಪದವಿ ಪ್ರಮಾಣ ಪತ್ರ ಸಲ್ಲಿಸಿ ಸ್ನಾತಕೋತ್ತರ ಪದವಿಗಾಗಿ ಕಾಯಂಕುಳಂ ಎಂಎಸ್‍ಎಂ ಕಾಲೇಜಿಗೆ ಸೇರಿದ್ದ ಎಸ್‍ಎಫ್‍ಐ ಅಲಪ್ಪುಳ ಜಿಲ್ಲಾ ಸಮಿತಿಯ ಮಾಜಿ ಸದಸ್ಯ ನಿಖಿಲ್ ಥಾಮಸ್ ವಿರುದ್ಧ ಕೇರಳ ವಿಶ್ವವಿದ್ಯಾಲಯ ಕ್ರಮ ಕೈಗೊಂಡಿದೆ.
ನಿಖಿಲ್ ಥಾಮಸ್ ಅವರ ಎಂಕಾಂ ಪ್ರವೇಶ ರದ್ದುಗೊಳಿಸುವಂತೆ ಕೇರಳ ವಿಸಿ ಡಾ. ಮೋಹನ್ ಕುನುಮ್ಮಲ್ ಆದೇಶಿಸಿದರು.
ನಿಖಿಲ್ ಥಾಮಸ್ ಕಳಿಂಗ ವಿಶ್ವವಿದ್ಯಾಲಯದ ವಿದ್ಯಾರ್ಥಿ ಅಲ್ಲ ಮತ್ತು ಆತನ ಪದವಿ ನಕಲಿ ಎಂದು ಕಳಿಂಗ ವಿಶ್ವವಿದ್ಯಾಲಯ ಸ್ಪಷ್ಟ್ಟಪಡಿಸಿದೆ. ವಿಶ್ವವಿದ್ಯಾನಿಲಯದ ವಿಶ್ವಾಸಾರ್ಹತೆಗೆ ಮಸಿ ಬಳಿಯಲು ಯತ್ನಿಸಿದ ನಿಖಿಲ್ ಥಾಮಸ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಳಿಂಗ ವಿಶ್ವವಿದ್ಯಾಲಯ ಕೇರಳ ವಿವಿ ರಿಜಿಸ್ಟ್ರಾರ್‍ಗೆ ಮನವಿ ಮಾಡಿದೆ.
ಇಂದು ಪ್ರವೇಶಕ್ಕೆ ಸಂಬಂಧಿಸಿದಂತೆ ಕೇರಳ ವಿಶ್ವವಿದ್ಯಾಲಯವು ಎಂಎಸ್‍ಎಂ ಕಾಲೇಜು ಅಧಿಕಾರಿಗಳಿಂದ ವಿವರಣೆಯನ್ನು ಕೇಳಿದೆ. ವಿವರಣೆ ಪಡೆದ ನಂತರ ಕಾಲೇಜಿನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ನಿಖಿಲ್ ಅವರ ಬಿಕಾಂ ಸಮಾನತೆ ಪ್ರಮಾಣ ಪತ್ರವನ್ನು ಹಿಂಪಡೆಯುವಂತೆಯೂ ವಿಸಿ ಆದೇಶಿಸಿದ್ದಾರೆ. ಇತರ ರಾಜ್ಯಗಳ ಪದವಿಯೊಂದಿಗೆ ಕೇರಳದಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಪದವಿಗಳನ್ನು ಪರಿಶೀಲಿಸುವ ಬಗ್ಗೆ ಸಿಂಡಿಕೇಟ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ವಿಸಿ ಮಾಹಿತಿ ನೀಡಿದರು.