ಕಾಸರಗೋಡು: ಚಂದ್ರಗಿರಿ ಲಯನ್ಸ್ ಕ್ಲಬ್ ಕಾಸರಗೋಡು ವತಿಯಿಂದ ಎರಡನೇ ಹಂತದ ಉಚಿತ ಡಯಾಲಿಸಿಸ್ ಯಂತ್ರಗಳ ಹಾಗೂ ಎರಡು ಮನೆಗಳ ಹಸ್ತಾಂತರ ಕಾರ್ಯಕ್ರಮ ಜೂ.30ರಂದು ಸಂಜೆ 6.30ಕ್ಕೆ ಕಾಸರಗೋಡು ಮುನ್ಸಿಪಲ್ ಟೌನ್ ಹಾಲ್ ನಲ್ಲಿ ನಡೆಯಲಿದೆ.
ಕಳೆದ ಎರಡೂವರೆ ವರ್ಷಗಳಿಂದ ಚಂದ್ರಗಿರಿ ಲಯನ್ಸ್ ಕ್ಲಬ್ ನೇತೃತ್ವದಲ್ಲಿ ಮಲಿಕ್ ದಿನಾರ್ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಡಯಾಲಿಸಿಸ್ ಘಟಕ ಕಾರ್ಯನಿರ್ವಹಿಸುತ್ತಿದ್ದು, ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಕಿಡ್ನಿ ರೋಗಿಗಳನ್ನು ಗುರುತಿಸಿ ಅವರಿಗೆ ಸಂಪೂರ್ಣ ಉಚಿತವಾಗಿ ಡಯಾಲಿಸಿಸ್ ಮಾಡಿಸಲಾಗುತ್ತಿರುವುದಾಗಿ ಚಂದ್ರಗಿರಿ ಲಯನ್ಸ್‍ಕ್ಲಬ್ ಅಧ್ಯಕ್ಷ ಎಂ.ಎಂ ನೌಶಾದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಡಯಾಲಿಸಿಸ್ ಯಂತ್ರಗಳ ಲೋಕಾರ್ಪಣೆ ಸಮಾರಂಭವನ್ನು ಶಾಸಕ ಎನ್.ಎ.ನೆಲ್ಲಿಕುನ್ ಉದ್ಘಾಟಿಸುವರು. ಚೆಂಗಳ ಪಂಚಾಯತ್ ಮತ್ತು ಉದುಮ ಪಂಚಾಯತ್ ನಲ್ಲಿ ನಿರ್ಮಿಸಲಾಗುವ ತಲಾ ಒಂದು ಮನೆಯ ಕೀಲಿಕೈಯನ್ನು ಶಾಸಕರಾದ ಸಿ.ಎಚ್.ಕುಂಜಂಬು ಹಾಗೂ ಎ.ಕೆ.ಎಂ ಅಶ್ರಫ್ ಫಲಾನುಭವಿಗಳಿಗೆ ಹಸ್ತಾಂತರಿಸುವರು. ಈ ಸಂದರ್ಭ ಬಡ ರೋಗಿಗಳಿಗೆ ಆರ್ಥಿಕ ನೆರವು ವಿತರಿಸಲಾಗುವುದು.
ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಮಹನೀಯರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಉದ್ಯಮಿ, ಸಾಮಾಜಿಕ, ಸಾಂಸ್ಕøತಿಕ ಕ್ಷೇತ್ರದ ಮುಖಂಡ ಕೆ.ಮೊಯ್ದೀನ್‍ಕುಟ್ಟಿ ಹಾಜಿ ಹಾಗೂ ವ್ಯಾಪಾರಿ, ಸಮಾಜ ಸೆವಕ ಅಚ್ಚು ನಾಯಮರ್‍ಮೂಲೆ ಅವರಿಗೆ ಲಯನ್ಸ್ ಎಕ್ಸಲೆನ್ಸ್ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಖ್ಯಾತ ಹಿನ್ನೆಲೆ ಗಾಯಕಿ, ಸಂಗೀತ ನಿರ್ದೇಶಕಿ ಮತ್ತು ಸೂಫಿ ಸಂಗೀತಗಾರ್ತಿ ಅನಿತಾ ಶೇಖ್ ನೇತೃತ್ವದಲ್ಲಿ ಸಂಗೀತ ಸಂಧ್ಯಾ ಕಾರ್ಯಕ್ರಮ ನಡೆಯಲಿದೆ.
2016ರಲ್ಲಿ ಅಸ್ತಿತ್ವಕ್ಕೆ ಬಂದ ಚಂದ್ರಗಿರಿ ಲಯನ್ಸ್ ಕ್ಲಬ್ ಈ ಹಿಂದೆ ನಾಲ್ಕು ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಸೇವಾ ಮತ್ತು ದಾನ ಕಾರ್ಯಗಳನ್ನು ಮಾಡಿದೆ. ಡಯಾಲಿಸಿಸ್ ಘಟಕದ ಹೊರತಾಗಿ, ಉಚಿತ ಆಂಬ್ಯುಲೆನ್ಸ್ ಸೇವೆ, ವಸತಿರಹಿತರಿಗೆ ಹದಿನಾರು ಮನೆಗಳನ್ನು ನಿರ್ಮಿಸಿ ವಿತರಿಸಲಾಗಿದೆ, ಅಲ್ಲದೆ ಎಪ್ಪತ್ತೈದು ಲಕ್ಷ ರೂಪಾಯಿಗಳ ದತ್ತಿ ಸೇವೆಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಫಿ ಎಂ. ನೆಲ್ಲಿಕುನ್ನು, ಎಂ.ಪಿ.ಸಿದ್ದೀಕ್, ಇಕ್ಬಾಲ್ ಪಡುವತ್ತಿಲ್. ಅಶ್ರಫ್ ಐವಾ, ಶರೀಫ್ ಕಪ್ಪಿಲ್ ಉಪಸ್ಥೀತರಿದ್ದರು.