ಬೀಜಿಂಗ್: 'ಭಾರತದಲ್ಲಿರುವ ಚೀನಾ ಪತ್ರಕರ್ತರ ಬಗ್ಗೆ ಅಲ್ಲಿನ ಸರ್ಕಾರ ತಾರತಮ್ಯ ನೀತಿ ಅನುಸರಿಸುವ ಮೂಲಕ ಅನ್ಯಾಯ ಎಸಗುತ್ತಿದೆ. ಅದೇ ಧೋರಣೆಯನ್ನೇ ನಾವು ಇಲ್ಲಿರುವ ಭಾರತೀಯ ಪತ್ರಕರ್ತರ ಬಗ್ಗೆ ತಳೆದಿದ್ದೇವೆ' ಎಂದು ಚೀನಾ ಪ್ರತಿಪಾದಿಸಿದೆ.
ಉಭಯ ದೇಶಗಳಲ್ಲಿ ಪತ್ರಕರ್ತರ ನಿರಂತರ ಉಪಸ್ಥಿತಿ ಬಗ್ಗೆ ತಲೆದೋರಿರುವ ವೀಸಾ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಚೀನಾವು, 'ಅಲ್ಲಿರುವ ನಮ್ಮ ದೇಶದ ಪತ್ರಕರ್ತರ ಜೊತೆ ಭಾರತವು ಸರಿಯಾಗಿ ವರ್ತಿಸುತ್ತಿಲ್ಲ' ಎಂದು ದೂರಿದೆ.
2020ರಲ್ಲಿ ನಡೆದ ಲಡಾಖ್ ಗಡಿ ಸಂಘರ್ಷದಲ್ಲಿ 24 ಭಾರತೀಯ ಯೋಧರು ಹುತಾತ್ಮರಾದ ಬಳಿಕ ಭಾರತ ಮತ್ತು ಚೀನಾ ನಡುವಣ ದ್ವಿಪಕ್ಷೀಯ ಬಾಂಧವ್ಯ ಹಳಸಿದೆ. ಇದು ಎರಡೂ ದೇಶಗಳ ಪತ್ರಕರ್ತರ ಕಾರ್ಯ ನಿರ್ವಹಣೆ ಮೇಲೂ ಪರಿಣಾಮ ಬೀರಿದೆ.
'ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿರುವ ಚೀನಾ ಪತ್ರಕರ್ತರಿಗೆ ಅಗತ್ಯ ವ್ಯವಸ್ಥೆ ಕಲ್ಪಿಸುವಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ' ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ ಬಿನ್ ಸೋಮವಾರ ದೂರಿದ್ದಾರೆ.
'ಮಾಧ್ಯಮಗಳ ಸಂವಹನಕ್ಕೆ ಸಂಬಂಧಿಸಿದಂತೆ ಭಾರತವು ವಿಧಿಸಿರುವ ಅಸಮಂಜಸ ಷರತ್ತುಗಳನ್ನು ಬದಲಾಯಿಸಬೇಕು. ನಮ್ಮ ಪತ್ರಕರ್ತರಿಗೆ ವೀಸಾ ನೀಡುವ ಜೊತೆಗೆ ಅಲ್ಲಿ ಅವರು ಕೆಲಸ ಮಾಡಲು ಪೂರಕ ವಾತಾವರಣ ಸೃಷ್ಟಿಸುತ್ತದೆಂಬ ವಿಶ್ವಾಸ ಇದೆ' ಎಂದರು.
'2020ರಿಂದಲೂ ನಮ್ಮ ಪತ್ರಕರ್ತರಿಗೆ ಹೊಸ ವೀಸಾ ನೀಡಿಲ್ಲ. ಹಾಗಾಗಿ, 14 ಮಂದಿಯ ಪೈಕಿ ಒಬ್ಬರಷ್ಟೇ ಅಲ್ಲಿ ಉಳಿದಿದ್ದಾರೆ. ಮಾಧ್ಯಮ ಸಂವಹನ ಬಲಪಡಿಸುವಿಕೆಗೆ ಸಂಬಂಧಿಸಿದಂತೆ ನಾವು ಅಗತ್ಯ ಕ್ರಮವಹಿಸಲು ಸಿದ್ಧ. ಆ ದೇಶವೂ ಇದಕ್ಕೆ ಪೂರಕವಾಗಿ ಸ್ಪಂದಿಸಬೇಕಿದೆ' ಎಂದರು.
ಒಟ್ಟು ನಾಲ್ವರು ಭಾರತೀಯ ಪತ್ರಕರ್ತರಿಗೆ ಚೀನಾದಲ್ಲಿ ಕೆಲಸ ನಿರ್ವಹಣೆಗೆ ಅನುಮತಿ ಸಿಕ್ಕಿತ್ತು. ಆದರೆ, ಇಬ್ಬರ ವೀಸಾಕ್ಕೆ ನಿರ್ಬಂಧ ಹೇರಿದ್ದರಿಂದ ಕಳೆದ ಏಪ್ರಿಲ್‌ನಲ್ಲಿ ಅವರು ಭಾರತಕ್ಕೆ ಮರಳಿದ್ದರು. ಉಳಿದ ಇಬ್ಬರ ಪೈಕಿ ವೀಸಾ ನವೀಕರಣಗೊಳ್ಳದ ಹಿನ್ನೆಲೆಯಲ್ಲಿ ಭಾನುವಾರ ಹಿಂದೂಸ್ತಾನ್ ಟೈಮ್ಸ್‌ನ ವರದಿಗಾರ ಸ್ವದೇಶಕ್ಕೆ ಮರಳಿದ್ದಾರೆ. ಈ ತಿಂಗಳಲ್ಲಿ ಪಿಟಿಐ ವರದಿಗಾರನ ವೀಸಾ ಅಂತ್ಯಗೊಳ್ಳಲಿದ್ದು, ಅವರು ವಾಪಸ್ ಬರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಇಬ್ಬರ ವೀಸಾ ನವೀಕರಣಕ್ಕೆ ಚೀನಾ ನಿರಾಕರಿಸಿದ್ದರಿಂದ ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ಚೀನಾ ಸ್ಟೇಟ್ ಮಿಡಿಯಾದ ಪತ್ರಕರ್ತರ ವಿರುದ್ಧವೂ ಕೇಂದ್ರ ಸರ್ಕಾರ ಇದೇ ಕ್ರಮ ಅನುಸರಿಸಿತ್ತು.
ಗೋವಾದಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆಯ ವಿದೇಶಾಂಗ ಸಚಿವರ ಸಭೆಯ ವರದಿಗಾರಿಕೆ ಮಾಡಲು ಚೀನಾ ಪತ್ರಕರ್ತರಿಗೆ ಭಾರತವು ತಾತ್ಕಾಲಿಕ ವೀಸಾ ನೀಡಿತ್ತು ಎಂದು ಮೂಲಗಳು ತಿಳಿಸಿವೆ.
'ವಿದೇಶಿ ಪತ್ರಕರ್ತರಿಗೆ ಭಾರತದಲ್ಲಿ ಕೆಲಸ ನಿರ್ವಹಿಸಲು ನಾವು ಅವಕಾಶ ನೀಡಿದ್ದೇವೆ. ಅದೇ ರೀತಿ ಚೀನಾವೂ ಭಾರತೀಯರ ಪತ್ರಕರ್ತರಿಗೆ ಅಲ್ಲಿ ಕೆಲಸ ನಿರ್ವಹಣೆಗೆ ಅನುಕೂಲ ಕಲ್ಪಿಸುತ್ತದೆ ಎಂಬ ವಿಶ್ವಾಸವಿದೆ' ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಕಳೆದ ತಿಂಗಳು ಹೇಳಿತ್ತು.