ಕಾಸರಗೋಡು: ಅಖಿಲ ಭಾರತ ರೈಲ್ವೇ ಪ್ರಯಾಣಿಕರ ಸೌಕರ್ಯ ಸಮಿತಿಯ ಅಧ್ಯಕ್ಷ ಪಿ.ಕೆ.ಕೃಷ್ಣದಾಸ್ ಜಿಲ್ಲೆಯ ವಿವಿಧ ರೈಲ್ವೆ ನಿಲ್ದಾಣಕ್ಕೆ ಶನಿವಾರ ಭೇಟಿ ನೀಡಿ, ರೈಲ್ವೆ ನಿಲ್ದಾಣಗಳ ಹಾಗೂ ಪ್ರಯಾಣಿಕರ ಸಮಸ್ಯೆಗಳ ಬಗ್ಗೆ ಅವಲೋಕನ ನಡೆಸಿದರು.
ಈ ಸಂದರ್ಭ ಕಾಸರಗೋಡು ಜಿಲ್ಲಾ ರೈಲ್ವೆ ಪ್ಯಾಸೆಂಜರ್ಸ್ ಅಸೋಸಿಯೇಶನ್ ಅಧ್ಯಕ್ಷ ಆರ್. ಪ್ರಶಾಂತ್ ಕುಮಾರ್, ಪ್ರಧಾನ ಕಾರ್ಯದರ್ಶಿ ನಾಸರ್ ಚೆರ್ಕಳ, ಅನ್ವರ್ ಟಿ.ಇ., ಮುತ್ತಲಿಬ್ ಅವರು ರೈಲ್ವೆ ಪ್ರಯಾಣಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿದರು.
ಕೋಯಿಕ್ಕೋಡ್‍ನಿಂದ ಮಂಗಳೂರಿಗೆ ಸಂಜೆ ವೇಳೆ ರೈಲು ಇಲ್ಲದಿರುವುದು ಹಾಗೂ ಮಂಗಳೂರಿನಿಂದ ಕಣ್ಣೂರಿಗೆ ರೈಲಿನ ವಯವಸ್ಥೆಯಿಲ್ಲದಿರುವುದರಿಂದ ಪ್ರಯಾಣಿಕರು ಹೆಚ್ಚಿನ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ರಾತ್ರಿ ಕಣ್ಣೂರು ತಲುಪುವ ಎಕ್ಸಿಕ್ಯೂಟಿವ್ ಎಕ್ಸ್‍ಪ್ರೆಸ್ ಮತ್ತು ಜನಶತಾಬ್ದಿ ಎಕ್ಸ್‍ಪ್ರೆಸ್‍ಗೆ ಸಂಪರ್ಕವಾಗಿ ಪ್ಯಾಸೆಂಜರ್ ಕೋಚ್ ಸರ್ವೀಸ್ ನಡೆಸಲು ಅಗತ್ಯ ಕ್ರಮ ಕೈಗೊಳ್ಳಬೇಖು. ಕುಂಬಳ ರೈಲು ನಿಲ್ದಾಣದಲ್ಲಿ 30 ಎಕರೆ ಜಾಗವನ್ನು ಬಳಸಿಕೊಂಡು ಕೊಚುವೇಲಿ ಮಾದರಿ ಟರ್ಮಿನಲ್ ಸ್ಥಾಪಿಸುವಂತೆ ಆಗ್ರಹಿಸಲಾಯಿತು. ಜತೆಗೆ ರೈಲ್ವೆ ನಿಲ್ದಾಣದಲ್ಲಿ ಟಿಕೆಟ್ ಕೌಂಟರ್‍ನಿಂದ ಪ್ಲಾಟ್‍ಫಾರ್ಮ್‍ಗೆ ಹೋಗುವ ಮಾರ್ಗದಲ್ಲಿ ಮೇಲ್ಛಾವಣಿ ನಿರ್ಮಿಸಬೇಕು, ಅದೇ ರೀತಿ ಅಂತ್ಯೋದಯ ಎಕ್ಸ್‍ಪ್ರೆಸ್ ಕೂಡ ಪ್ರತಿನಿತ್ಯ ಸೇವೆ ನೀಡುವಂತೆ ಮನವಿ ಮಾಡಲಾಯಿತು. ರವೀಶ ತಂತ್ರಿ ಕುಂಟಾರು ಉಪಸ್ಥಿತರಿದ್ದರು.