ಪೆರ್ಲ : ವ್ಯಕ್ತಿಯೊಬ್ಬನ ಸಾವು ಜನಮಾನಸದಲ್ಲಿ ಪರಿಣಾಮವನ್ನುಂಟುಮಾಡಬೇಕು. ಅಂತಹ ಶ್ರೀಮಂತ ಸಾವನ್ನು ಪಡೆಯಬೇಕಾದರೆ ಬದುಕಿನಲ್ಲಿ ಅಪಾರ ಪರಿಶ್ರಮಪಟ್ಟವನಾಗಿರಬೇಕು ಎಂದು ಸಾಹಿತಿ, ಕೇಂದ್ರೀಯ ವಿದ್ಯಾಲಯದ ವಿಶ್ರಾಂತ ಮುಖ್ಯೋಪಾಧ್ಯಾಯ ಎಸ್.ಎನ್.ಭಟ್ ಸೈಪಂಗಲ್ಲು ಅಭಿಪ್ರಾಯಪಟ್ಟರು.
ಅವರು ಸವಿಹೃದಯದ ಕವಿಮಿತ್ರರು ವೇದಿಕೆ ಪೆರ್ಲ ಮತ್ತು ಸಮತಾ ಸಾಹಿತ್ಯವೇದಿಕೆ ಪಾಣಾಜೆ ಸಹಯೋಗದಲ್ಲಿ ಪೆರ್ಲದ ವ್ಯಾಪಾರಿ ಭವನದಲ್ಲಿ ಹಮ್ಮಿಕೊಂಡ 'ನುಡಿನಮನ ಹಾಗೂ ಮುಂಗಾರು ಕವಿಗೋಷ್ಠಿ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೇರಳ ವ್ಯವಸಾಯಿ ಏಕೋಪನಾ ಸಮಿತಿ ಪೆರ್ಲ ಘಟಕದ ಉಪಾಧ್ಯಕ್ಷ ಪ್ರಸಾದ್ ಟಿ. ಪೆರ್ಲ ಅವರು ಇತ್ತೀಚೆಗೆ ನಿಧನರಾದ ಪ್ರಸಿದ್ಧ ವ್ಯಾಪಾರಿಗಳೂ ಸಾಹಿತ್ಯಪೋಷಕರೂ ಆಗಿದ್ದ ದಿ.ಅಬ್ದುಲ್ ರಹಿಮಾನ್ ಅವರಿಗೆ ನುಡಿನಮನ ಸಲ್ಲಿಸಿ ಅವರ ಸಂಘಟನಾ ಸಾಮಥ್ರ್ಯ ಸಾಧನೆಗಳನ್ನು, ನಿಸ್ವಾರ್ಥ ಮನೋಭಾವನೆಯನ್ನು ಸ್ಮರಿಸಿದರು. ಬಜಕೂಡ್ಲು ಕೃಷ್ಣ ಪೈ ಅವರು ಮಾತನಾಡಿ ಅಬ್ದುಲ್ ರಹಿಮಾನ್ ಅವರೊಂದಿಗಿನ ತಮ್ಮ ಒಡನಾಟದ ನೆನಪುಗಳನ್ನು ಹಂಚಿಕೊಂಡರು.
ಆ ಬಳಿಕ ನಡೆದ ಮುಂಗಾರು ಕವಿಗೋಷ್ಠಿಯಲ್ಲಿ ನರಸಿಂಹ ಭಟ್ ಕಟ್ಟದಮೂಲೆ, ಶಂಕರನಾರಾಯಣ ಭಟ್ ಕಕ್ಕೆಪ್ಪಾಡಿ, ನಿರ್ಮಲಾ ಶೇಷಪ್ಪ ಖಂಡಿಗೆ, ನಳಿನಿ ಟೀಚರ್, ಹರ್ಷಿತಾ ಪಿ., ರಿತೇಶ್ ಕಿರಣ್ ಕಾಟುಕುಕ್ಕೆ, ಸವಿತಾ ರಾಮಕುಂಜ, ನಾರಾಯಣ ನಾಯ್ಕ ಕುದ್ಕೋಳಿ, ಸುಜಯಾ ಸಜಂಗದ್ದೆ, ಪ್ರಮೀಳಾ ಚುಳ್ಳಿಕಾನ, ಬಾಲಕೃಷ್ಣ ನಾಯ್ಕ ಏಳ್ಕಾನ ಸ್ವರಚಿತ ಕವನಗಳನ್ನು ವಾಚಿಸಿದರು.
ಹಿರಿಯ ಸಾಹಿತಿ, ವಿಶ್ರಾಂತ ಪ್ರಾಂಶುಪಾಲ ಡಾ. ಬೇ.ಸಿ. ಗೋಪಾಲಕೃಷ್ಣ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಪಂಚಾಯತಿ ಸದಸ್ಯ ನಾರಾಯಣ ನಾಯ್ಕ ಅಡ್ಕಸ್ಥಳ, ಅಂಬೇಡ್ಕರ್ ವಿಚಾರವೇದಿಕೆ ಬದಿಯಡ್ಕ ಇದರ ಅಧ್ಯಕ್ಷ ರಾಮ ಪಟ್ಟಾಜೆ, ಹಿರಿಯ ಸಾಹಿತಿ ಹರೀಶ ಪೆರ್ಲ ಉಪಸ್ಥಿತರಿದ್ದರು.
ಹರ್ಷಿತಾ ಪ್ರಾರ್ಥಿಸಿದರು. ಸಮತಾ ಸಾಹಿತ್ಯವೇದಿಕೆಯ ಬಾಲಕೃಷ್ಣ ಬೇರಿಕೆ ಸ್ವಾಗತಿಸಿ, ಸವಿಹೃದಯದ ಕವಿಮಿತ್ರರು ವೇದಿಕೆಯ ಸಂಚಾಲಕ ಸುಭಾಷ್ ಪೆರ್ಲ ವಂದಿಸಿದರು. ನಳಿನಿ ಟೀಚರ್ ಸೈಪಂಗಲ್ಲು ಕಾರ್ಯಕ್ರಮ ನಿರೂಪಿಸಿದರು.