ಉಪ್ಪಳ : ವಿದ್ಯಾರ್ಥಿಗಳ ಓದು ಪಠ್ಯಪುಸ್ತಕಕ್ಕೆ ಮಾತ್ರ ಸೀಮಿತವಾಗಬಾರದು. ಪತ್ರಿಕೆಗಳನ್ನು, ಸಾಹಿತ್ಯ ಪುಸ್ತಕಗಳೇ ಮೊದಲಾದ ನಮ್ಮ ಜ್ಞಾನಪ್ರಪಂಚವನ್ನು ವಿಸ್ತಾರಗೊಳಿಸುವ ಮತ್ತಿತರ ಪುಸ್ತಕಗಳನ್ನು ಓದುವ ಹವ್ಯಾಸವನ್ನು ನಿರಂತರವಾಗಿ ಬೆಳೆಸಿಕೊಳ್ಳಬೇಕು ಎಂದು ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆಯ ನಿವೃತ್ತ ಶಿಕ್ಷಕ ವಿಶಾಲಾಕ್ಷ ಪುತ್ರಕಳ ಹೇಳಿದರು.
ಬೇಕೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ನಡೆದ ವಾಚನಾ ವಾರಾಚರಣೆಯ ಸಮಾರೋಪ ಹಾಗೂ ಸಾಹಿತ್ಯ, ಐಟಿ, ಗಣಿತ, ವಿಜ್ಞಾನ ಸಂಘ ಸೇರಿದಂತೆ ವಿವಿಧ ಕ್ಲಬ್ ಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಹಿಂಜರಿಕೆ ತೋರಿಸದೆ ವಿವಿಧ ಕ್ಲಬ್ಬುಗಳ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ಪ್ರತಿಭೆ, ಸಾಮಥ್ರ್ಯವನ್ನು ಪ್ರದರ್ಶಿಸಬೇಕೆಂದು ಅವರು ಕರೆ ನೀಡಿದರು. ಮೊಬೈಲ್ ದಾಸರಾಗದೆ ಮನೆಯಲ್ಲಿ ಬಿಡುವಿನ ವೇಳೆಯನ್ನು ಪುಸ್ತಕ ವಾಚನ ಸೃಜನಶೀಲ ರಚನೆಗಳಿಗೆ ಮೀಸಲಿಡಬೇಕೆಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಶ್ರಫ್ ಬೇಕೂರು ಅಧ್ಯಕ್ಷತೆ ವಹಿಸಿದ್ದರು. ವಾಚನಾ ವಾರಾಚರಣೆಯಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಮುಖ್ಯ ಶಿಕ್ಷಕಿ ಲಕ್ಷ್ಮಿ ಎಂ.ಎ, ಶಾಲಾ ನೌಕರ ಸಂಘದ ಕಾರ್ಯದರ್ಶಿ ಮಹಮ್ಮದ್ ಕೆ.ಬಿ, ಶಿಕ್ಷಕಿ ಭಾಗ್ಯಲಕ್ಷ್ಮೀ ಶುಭ ಹಾರೈಸಿದರು. ತಿಲಕ್ ರಾಜ್ ಸ್ವಾಗತಿಸಿ, ಧನುಷಾ ವಂದಿಸಿದರು. ಆಯಿಶತ್ ಹನಾ ಮತ್ತು ನೆಸ್ನಾ ಕಾರ್ಯಕ್ರಮ ನಿರೂಪಿಸಿದರು.