ನವದೆಹಲಿ: ಬ್ಯಾಂಕ್‌ಗಳಲ್ಲಿನ ವಂಚನೆ ಖಾತೆಗಳು ಮತ್ತು ಉದ್ದೇಶಪೂರ್ವಕ ಸುಸ್ತಿದಾರರ (ಡೀಫಾಲ್ಟ್‌ಗಳ) ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಅನುವು ಮಾಡಿಕೊಡುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಹೊರಡಿಸಿರುವ ಅಧಿಸೂಚನೆ ರದ್ದುಪಡಿಸುವಂತೆ ಕಾಂಗ್ರೆಸ್ ಒತ್ತಾಯಿಸಿದೆ.
ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಈ ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರದ ಒತ್ತಡವೇನಾದರೂ ಇದೆಯೇ ಎನ್ನುವುದನ್ನು ಸ್ಪಷ್ಟಪಡಿಸುವಂತೆಯೂ ಆರ್‌ಬಿಐಗೆ ಒತ್ತಾಯಿಸಿದೆ.
ಎಐಸಿಸಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಅವರು, ಉದ್ದೇಶಪೂರ್ವಕ ಸುಸ್ತಿದಾರರು ಮತ್ತು ಅವ್ಯವಹಾರಗಳಿಗೆ ಸಂಬಂಧಿಸಿದ ನಿಯಮಗಳನ್ನು ಏಕೆ ಬದಲಾಯಿಸಲಾಗಿದೆ ಎಂಬುದರ ಬಗ್ಗೆ ಆರ್‌ಬಿಐ ವಿವರಣೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
'ದೊಡ್ಡ ಉದ್ಯಮ ಸಮೂಹಗಳ ಸ್ನೇಹಿತರು ಪ್ರಧಾನಿ ನರೇಂದ್ರ ಮೋದಿಗೆ ಹತ್ತಿರವಾಗಿದ್ದು, ಅವರಿಗೆ ಅನುಕೂಲ ಕಲ್ಪಿಸಲು ನಿಯಮಗಳನ್ನು ಬದಲಾಯಿಸಲಾಗಿದೆ. ಇದಕ್ಕೆ ಪ್ರಮುಖ ಉದಾಹರಣೆ ಎಂದರೆ, ಅದಾನಿ ಸಮೂಹ. ಈಗಾಗಲೇ ನಮ್ಮ ಎಚ್‌ಡಿಕೆ (ಹಮ್ ಅದಾನಿ ಕೀ ಹೈ ಕೌನ್) ಸರಣಿಯಲ್ಲಿ ಪ್ರಧಾನಿ ಅವರಿಗೆ ಈ ಬಗ್ಗೆ 100 ಪ್ರಶ್ನೆಗಳನ್ನು ಕೇಳಿದ್ದೇವೆ. ಸಾರ್ವಜನಿಕರ ಹಣದೊಂದಿಗೆ ಪಲಾಯನ ಮಾಡಿರುವ ಎಲ್ಲ ಉದ್ದೇಶಪೂರ್ವಕ ಸುಸ್ತಿದಾರರು ಮತ್ತು ವಂಚನೆಗಳಿಗೆ ಕ್ಲೀನ್ ಚಿಟ್ ನೀಡಿರುವುದು ಕೂಡ ಮತ್ತೊಂದು ಉದಾಹರಣೆಯಾಗಿದೆ' ಎಂದು ಅವರು ಆರೋಪಿಸಿದ್ದಾರೆ.