ಗುವಾಹಟಿ: ಮಣಿಪುರದಲ್ಲಿ ಹಿಂಸಾಚಾರ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಸಿಎಂ ಬಿರೇನ್ ಸಿಂಗ್ ರಾಜೀನಾಮೆ ನೀಡಲಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ರಾಜೀನಾಮೆ ನೀಡುವುದಿಲ್ಲ ಎಂದು ಸಿಎಂ ಯು-ಟರ್ನ್ ಹೊಡೆದಿದ್ದಾರೆ. ಮಣಿಪುರ ಸಿಎಂ ಗೃಹ ಕಚೇರಿಯ ಹೊರಭಾಗದಲ್ಲಿ ಹೈಡ್ರಾಮ ನಡೆದಿದ್ದು, ನೂರಾರು ಮಹಿಳೆಯರು ರಸ್ತೆ ತಡೆದಿದ್ದಾರೆ.
ಮಧ್ಯಾಹ್ನ 1 ಗಂಟೆಗೆ ರಾಜಭವನಕ್ಕೆ ತೆರಳಬೇಕಿದ್ದ ಸಿಎಂ ಬಿರೇನ್ ಕಾರ್ಯಕ್ರಮ ನಂತರ 3 ಗಂಟೆಗೆ ಮುಂದೂಡಲ್ಪಟ್ಟಿತ್ತು. ಮಧ್ಯಾಹ್ನ 2:20 ಗಂಟೆ ವೇಳೆಗೆ ಮನೆಯಿಂದ ಹೊರಬಂದ ಬೆನ್ನಲ್ಲೇ ನೂರಾರು ಮಹಿಳೆಯರು ಅವರಿಗೆ ರಸ್ತೆ ಅಡ್ಡಗಟ್ಟಿ, ಬೆಂಗಾವಲುಪಡೆಯ ವಾಹನಗಳನ್ನು ರಾಜಭವನ ತಲುಪುವುದರಿಂದ ತಡೆಗಟ್ಟಿ, ರಾಜೀನಾಮೆ ನೀಡದಂತೆ ಸಿಂಗ್ ಅವರನ್ನು ಒತ್ತಾಯಿಸಿ, ಅವರ ಪರ ಬೆಂಬಲ ಘೋಷಣೆಗಳನ್ನು ಕೂಗಿದರು. ಈ ಬಳಿಕ ನಂತರ ಸಿಂಗ್ ಅವರು ರಾಜೀನಾಮೆ ನೀಡದೆ ತಮ್ಮ ನಿವಾಸಕ್ಕೆ ಮರಳಿದರು.
ಸ್ವಲ್ಪ ಸಮಯದ ನಂತರ. ಕೆಲವು ಸಚಿವರು ಹೊರಬಂದು ಸಿಂಗ್ ಅವರ ರಾಜೀನಾಮೆ ಪತ್ರವನ್ನು ಓದಿದರು. ಪತ್ರವನ್ನು ನೀಡಿದ ನಂತರ ಮಹಿಳೆಯರ ಒಂದು ವಿಭಾಗವು ಅದನ್ನು ಹರಿದು ಹಾಕಿತು. ನಂತರ, ಸಿಂಗ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡದೇ ಇರಲು ನಿರ್ಧರಿಸಿರುವುದಾಗಿ ಬಿರೇನ್ ಸಿಂಗ್ ಘೋಷಿಸಿದ್ದಾರೆ. ಆದರೆ ಬಿರೇನ್ ಸಿಂಗ್ ತಮ್ಮ ಖುರ್ಚಿ ಉಳಿಸಿಕೊಳ್ಳುವುದಕ್ಕಾಗಿ ಈ ನಾಟವಾಡಿದ್ದಾರೆ ಎಂಬ ಟೀಕೆಗಳೂ ವ್ಯಕ್ತವಾಗತೊಡಗಿವೆ.