ವಾಷಿಂಗ್ಟನ್: ಅಮೆರಿಕದಾದ್ಯಂತ ಇರುವ ಎಲ್ಲಾ ಹಿಂದೂಗಳೊಂದಿಗೆ ಒಟ್ಟಾಗಿ ಸೇರುವ ಅವಶ್ಯಕತೆಯಿದೆ ಎಂದು ಯುಎಸ್ ಕಾಂಗ್ರೆಸ್ ಸದಸ್ಯೆ ಶೀಲಾ ಜಾಕ್ಸನ್ ಲೀ ಹೇಳಿದ್ದಾರೆ.
ಯುಎಸ್ ಕ್ಯಾಪಿಟಲ್ ಹಿಲ್‌ನಲ್ಲಿ ಬುಧವಾರ ಆಯೋಜಿಸಲಾಗಿದ್ದ ಮೊಟ್ಟಮೊದಲ ಹಿಂದೂ-ಅಮೆರಿಕನ್ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಅಮೆರಿಕದಲ್ಲಿ ಹಿಂದೂಗಳ ಶಕ್ತಿಯು ಶಕ್ತಿಯುತವಾಗಿದೆ. ನಾವು ಅವರೊಟ್ಟಿಗೆ ಸೇರಬೇಕಾಗಿದೆ, ಅಮೆರಿಕಾದಾದ್ಯಂತ ಇರುವ ಎಲ್ಲಾ ಹಿಂದೂಗಳೊಂದಿಗೆ ಒಗ್ಗೂಡಿದರೆ ಅದು ಪ್ರಬಲ ಶಕ್ತಿಯಾಗಲಿದೆ ಎಂದರು.
ಲೀ ತಮ್ಮ ಭಾಷಣದಲ್ಲಿ ದೈವತ್ವದ ತಿಳುವಳಿಕೆ ಮತ್ತು ದೈವತ್ವದ ಅರ್ಥವನ್ನು ಕಲಿಯುತ್ತಿರುವುದಾಗಿ ತಿಳಿಸಿದರು. ನಾವು ದೈವಿಕರು, ಅಂದರೆ ನಾವು ಒಳ್ಳೆಯ ಕೆಲಸ ಮಾಡುವ ಸಾಮರ್ಥ್ಯವನ್ನು ಹೊಂದಿದ್ದೇವೆ ಎಂದರ್ಥ. ಭಾರತೀಯ ಪರಂಪರೆಯಲ್ಲದ ಹಿಂದೂಗಳು ಒಳ್ಳೆಯತನದಿಂದಾಗಿ ಅದರ ನಂಬಿಕೆಯನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಭಾರತವು ಅತಿದೊಡ್ಡ ಮತ್ತು ಹಳೆಯ ಪ್ರಜಾಪ್ರಭುತ್ವ ರಾಷ್ಟ್ರ ಎಂಬುದರಲ್ಲಿ ಸಂದೇಹವಿಲ್ಲ. ನಾವೆಲ್ಲರೂ ಸವಾಲುಗಳನ್ನು ಹೊಂದಿದ್ದೇವೆ. ಆದರೆ ನಾವು ಅದನ್ನು ನಮ್ಮ ಸ್ವಂತ ನಂಬಿಕೆಯಿಂದ, ಹಿಂದೂಗಳ ನಂಬಿಕೆಯಿಂದ, ಒಳ್ಳೆಯ ರೀತಿಯಲ್ಲಿ ಮಾಡಿದರೆ ಪ್ರಜಾಪ್ರಭುತ್ವವನ್ನು ಮುಂದಕ್ಕೆ ಕೊಂಡೊಯ್ಯಬಹುದು ಎಂದರು.
ನಮ್ಮ ಹಕ್ಕುಗಳನ್ನು ನಾವು ರಕ್ಷಿಸಿಕೊಳ್ಳಬಹುದು. ನಂಬಿಕೆಯನ್ನು ಅಡೆತಡೆಯಿಲ್ಲದೆ ಆಚರಣೆ ಮಾಡಲು ನಾವು ನಿಮಗೆ ಅವಕಾಶ ನೀಡಬಹುದು. ಯಾವುದೇ ಅಡೆತಡೆ ಇಲ್ಲದೆ ಧ್ವನಿ ಎತ್ತಲು ಅನುಮತಿಸಬಹುದು. ಶಾಂತಿಯನ್ನು ಸಹ ಉತ್ತೇಜಿಸಬಹುದು, ಅದರಲ್ಲಿ ನಾನು ನಂಬಿಕೆ ಹೊಂದಿದ್ದೇನೆ ಎಂದು ಅವರು ತಿಳಿಸಿದರು.