ಜೈಪುರ: ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರೊಂದಿಗೆ ಕೆಲ ವರ್ಷಗಳಿಂದ ಭಿನ್ನಾಭಿಪ್ರಾಯ ಹೊಂದಿರುವ ಕಾಂಗ್ರೆಸ್ ಭಿನ್ನಮತೀಯ ನಾಯಕ, ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ಪಕ್ಷ ಬಿಡುವುದು ನಮಗೆ ಇಷ್ಟವಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.
ಸಚಿವ ಭಜನ್ ಲಾಲ್ ಜಾದವ್ ಅವರ ಮಗಳ ಮದುವೆಯಲ್ಲಿ ಪಾಲ್ಗೊಂಡಿದ್ದ ವೇಣುಗೋಪಾಲ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಸಚಿನ್ ಪೈಲಟ್ ಅವರು ಪಕ್ಷ ಬಿಡುವುದು ನಮಗೆ ಇಷ್ಟವಿಲ್ಲ ಎಂದರು. ಹಾಗೇ ಅಶೋಕ್ ಗೆಹಲೋತ್ ಹಾಗೂ ಸಚಿನ್ ಪೈಲಟ್ ನಡುವಿನ ಭಿನ್ನಾಭಿಪ್ರಾಯ ದೂರ ಮಾಡಲಾಗುವುದು ಎಂದರು.
ಗುರುವಾರ ತಡರಾತ್ರಿ ವೇಣುಗೋಪಾಲ್ ಅವರು ಅಶೋಕ್ ಗೆಹಲೋತ್ ಅವರನ್ನು ಭೇಟಿಯಾಗಿ ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು. ಗೆಹಲೋತ್ ಅವರನ್ನು ಭೇಟಿ ಮಾಡುವುದಕ್ಕೂ ಮುನ್ನ ಸಚಿನ್ ಪೈಲಟ್ ಅವರನ್ನು ಭೇಟಿಯಾಗಿದ್ದರು.
ಕಾಂಗ್ರೆಸ್‌ನಲ್ಲಿ ಉಲ್ಬಣಗೊಂಡಿರುವ ಭಿನ್ನಮತವನ್ನು ಶಮನ ಮಾಡಲು ಮಲ್ಲಿಕಾರ್ಜುನ ಖರ್ಗೆ ಅವರ ಸೂಚನೆ ಮೇರೆಗೆ ವೇಣುಗೋಪಾಲ್ ರಾಜಸ್ಥಾನಕ್ಕೆ ಬಂದಿದ್ದಾರೆ.
ರಾಜಸ್ಥಾನ ಕಾಂಗ್ರೆಸ್ ಸಮಿತಿಯಲ್ಲಿ ಭುಗಿಲೆದ್ದಿದ್ದ ಭಿನ್ನಮತ ಶಮನಕ್ಕೆ ಕಾಂಗ್ರೆಸ್ ನಾಯಕರು ಹೊಂದಾಣಿಕೆ ಸೂತ್ರ ರೂಪಿಸಿದ್ದರು. ಆದರೆ ಅದರಿಂದ ಸಮಾಧಾನಗೊಳ್ಳದ ಸಚಿನ್ ಪೈಲಟ್ ಪಕ್ಷದಿಂದ ಹೊರ ನಡೆದು 'ಪ್ರಗತಿಶೀಲ ಕಾಂಗ್ರೆಸ್' ಎಂಬ ಹೊಸ ಪಕ್ಷ ಘೋಷಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ರಾಜಸ್ಥಾನದಲ್ಲಿ ಈ ವರ್ಷಾಂತ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಅಷ್ಟರೊಳಗೆ ರಾಜ್ಯದ ಕಾಂಗ್ರೆಸ್ ಸಮಿತಿಯಲ್ಲಿ ಶಾಂತಿ ನೆಲೆಸುವಂತೆ ಮಾಡಲು ಕಾಂಗ್ರೆಸ್ ಹೈಕಮಾಂಡ್ ಕಸರತ್ತು ನಡೆಸುತ್ತಿದೆ.
ಒಂದು ವೇಳೆ ಪೈಲಟ್ ಅವರು ಅಂತಿಮವಾಗಿ ಪಕ್ಷ ತ್ಯಜಿಸಲು ನಿರ್ಧರಿಸಿದರೆ, ಈಗಾಗಲೇ ಕಾಂಗ್ರೆಸ್ ತ್ಯಜಿಸಿರುವ ಗುಲಾಂ ನಬಿ ಆಜಾದ್, ಜ್ಯೋತಿರಾದಿತ್ಯ ಸಿಂಧಿಯಾ, ಕಪಿಲ್ ಸಿಬಲ್, ಜಿತೇಂದ್ರ ಪ್ರಸಾದ, ಆರ್‌ಪಿಎನ್ ಸಿಂಗ್, ಸುನಿಲ್ ಜಾಖಡ್, ಅಶ್ವನಿ ಕುಮಾರ್, ಹಾರ್ದಿಕ್ ಪಟೇಲ್ ಮತ್ತು ಅಲ್ಪೆಶ್ ಠಾಕೋರ್ ಅವರ ಪಟ್ಟಿಯನ್ನು ಸೇರಲಿದ್ದಾರೆ.
ಪ್ರಶಾಂತ್ ಕಿಶೋರ್ ನೆರವು: ಪೈಲಟ್ ಅವರ ಹೊಸ ಪಕ್ಷ ರಚನೆಗೆ ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್ ಕಿಶೋರ್ ನೆರವಾಗುತ್ತಿದ್ದಾರೆ. ಅಲ್ಲದೆ ರಾಜಸ್ಥಾನದಲ್ಲಿ ಹನುಮಾನ್ ಬೇನಿವಾಲ್ ಅವರ ರಾಷ್ಟ್ರೀಯ ಲೋಕತಾಂತ್ರಿಕ್ ಪಕ್ಷ (ಆರ್‌ಎಲ್‌ಪಿ) ಮತ್ತು ಎಎಪಿ ಜತೆಗೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ ಎಂದು ಮೂಲಗಳು ಹೇಳಿವೆ.