ನವದೆಹಲಿ: ದೇಶದ ಪ್ರಮುಖ ನಗರಗಳಲ್ಲಿ ಟೊಮೇಟೊ ಬೆಲೆ 100 ರೂಪಾಯಿಗೂ ಹೆಚ್ಚಾಗಿದ್ದು, ಟೊಮೆಟೊ ಬೆಲೆ ಏರಿಕೆಯು ತಾತ್ಕಾಲಿಕ ವಿದ್ಯಮಾನ. ಶೀಘ್ರದಲ್ಲೇ ದರ ಇಳಿಕೆಯಾಗಲಿದೆ ಎಂದು ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
"ಇದು ಹೆಚ್ಚು ಹಾಳಾಗುವ ವಸ್ತುವಾಗಿದೆ. ಹಠಾತ್ ಮಳೆ ಬೀಳುವ ಪ್ರದೇಶಗಳಲ್ಲಿ ಟೊಮೇಟೊ ಸಾಗಾಟದ ಮೇಲೆ ಪರಿಣಾಮ ಬೀರುತ್ತದೆ. ಇದು ತಾತ್ಕಾಲಿಕ ಸಮಸ್ಯೆ. ಶೀಘ್ರದಲ್ಲೇ ಟೊಮೆಟೊ ಬೆಲೆ ಇಳಿಕೆಯಾಗಲಿದೆ. ಈ ಸಮಯದಲ್ಲಿ ಪ್ರತಿ ವರ್ಷ ಟೊಮೆಟೊ ಬೆಲೆ ಏರಿಕೆಯಾಗುತ್ತದೆ" ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಅವರು ಹೇಳಿದ್ದಾರೆ.
ದೇಶಾದ್ಯಂತ ಟೊಮೆಟೊ ಬೆಲೆಯಲ್ಲಿ ಭಾರಿ ಏರಿಕೆಯಾಗಿದ್ದು, ಸದ್ಯ ಶತಕದ ಗಡಿ ದಾಟಿದೆ. ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಟೊಮ್ಯಾಟೋ ಬೆಲೆ ನೂರು ರೂಪಾಯಿ ಮುಟ್ಟಿದೆ. ಕಳೆದ ವಾರ 40-50 ರೂಪಾಯಿ ಆಸುಪಾಸಿನಲ್ಲಿದ್ದ ಟೊಮ್ಯಾಟೊ ಬೆಲೆ ಒಂದೇ ವಾರದಲ್ಲಿ ದುಪ್ಪಟ್ಟಾಗಿದೆ.
ದೇಶದ ನಾಲ್ಕು ಮಹಾನಗರಗಳಾದ, ದೆಹಲಿಯಲ್ಲಿ ಟೊಮೆಟೊ ಬೆಲೆ ಕೆಜಿಗೆ 60 ರೂ., ಮುಂಬೈ ಕೆಜಿಗೆ 42 ರೂ., ಕೋಲ್ಕತ್ತಾ ಕೆಜಿಗೆ 75 ರೂ. ಮತ್ತು ಚೆನ್ನೈನಲ್ಲಿ ಕೆಜಿಗೆ 67 ರೂ. ಇದೆ.
ಇತರ ಪ್ರಮುಖ ನಗರಗಳ ಪೈಕಿ ಬೆಂಗಳೂರಿನಲ್ಲಿ ಟೊಮೆಟೊ ಕೆಜಿಗೆ 52 ರೂ., ಜಮ್ಮುವಿನಲ್ಲಿ 80 ರೂ., ಲಖನೌದಲ್ಲಿ ಕೆಜಿಗೆ ರೂ. 60, ಶಿಮ್ಲಾದಲ್ಲಿ ರೂ. 88, ಭುವನೇಶ್ವರದಲ್ಲಿ ರೂ. 100 ಮತ್ತು ರಾಯ್ಪುರದಲ್ಲಿ ರೂ. 99 ರೂಪಾಯಿ.
ಇಲಾಖೆಯ ಅಂಕಿಅಂಶಗಳ ಪ್ರಕಾರ ಗೋರಖ್‌ಪುರ(ಉತ್ತರ ಪ್ರದೇಶ) ಮತ್ತು ಬಳ್ಳಾರಿ(ಕರ್ನಾಟಕ)ಯಲ್ಲಿ ಅತಿ ಹೆಚ್ಚು ಅಂದರೆ ಕೆಜಿಗೆ 122 ರೂಪಾಯಿಗೆ ಟೊಮೆಟೊ ಮಾರಾಟವಾಗಿದೆ.