ಕಣ್ಣೂರು: ಎಲತ್ತೂರಿನಲ್ಲಿ ಶಾರುಖ್ ಸೈಫೀ ಸುಟ್ಟ ಅದೇ ರೈಲಿಗೆ ಕಣ್ಣೂರಿನಲ್ಲಿ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ. ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ರೈಲಿನ ಬೋಗಿ ಸುಟ್ಟು ಕರಕಲಾಗಿದೆ.
ಅಲಪ್ಪುಳ-ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್‍ಪ್ರೆಸ್ ರೈಲಿನ ಬೋಗಿ ಸುಟ್ಟು ಕರಕಲಾಗಿದೆ. ನಿನ್ನೆ ಮಧ್ಯರಾತ್ರಿ ಒಂದೂವರೆ ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಯಾರಿಗೂ ಗಾಯವಾಗಿಲ್ಲ. ವಿಧ್ವಂಸಕ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ ಎಂದು ರೈಲ್ವೆ ಪೆÇಲೀಸರು ತಿಳಿಸಿದ್ದಾರೆ. ಎಲತ್ತೂರಿನಲ್ಲಿ ದಾಳಿ ನಡೆಸಿದ ಅದೇ ರೈಲಿಗೆ ಬೆಂಕಿ ಹಚ್ಚಿರುವುದು ನಿಗೂಢತೆಯನ್ನು ಹೆಚ್ಚಿಸಿದೆ.
ರೈಲು ರಾತ್ರಿ 11.45ಕ್ಕೆ ಕಣ್ಣೂರಿನಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸಿತು. ಹಿಂಭಾಗದ ಮೂರನೇ ಬೋಗಿ ಸುಟ್ಟು ಕರಕಲಾಗಿದೆ. ಅಗ್ನಿಶಾಮಕ ದಳದ ಮೂರು ಘಟಕಗಳು ಸುದೀರ್ಘ ಪ್ರಯತ್ನದ ನಂತರ ಬೆಂಕಿ ನಿಯಂತ್ರಣಕ್ಕೆ ತಂದರು. ಸಮೀಪದ ಬೋಗಿಗಳಿಗೆ ಹಾನಿಯಾಗಿಲ್ಲ.
ವ್ಯಕ್ತಿಯೊಬ್ಬ ಕೋಚ್‍ನತ್ತ ಬೆತ್ತ ಹಿಡಿದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ.
ಏಪ್ರಿಲ್ 2ರಂದು ರಾತ್ರಿ 9.25ಕ್ಕೆ ದೆಹಲಿ ಮೂಲದ ಶಾರುಖ್ ಸೈಫಿ ಎಂಬಾತ ಅದೇ ರೈಲಿಗೆ ಎಲತ್ತೂರಿನಲ್ಲಿ ಬೆಂಕಿ ಹಚ್ಚಿದ್ದ. ಮೂವರು ಸಾವನ್ನಪ್ಪಿರುವ ಪ್ರಕರಣದ ತನಿಖೆಯನ್ನು ಎನ್‍ಐಎ ನಡೆಸುತ್ತಿದೆ.
ಕಣ್ಣೂರು ರೈಲ್ವೆ ಯಾರ್ಡ್‍ನಲ್ಲಿ ನಡೆದ ಎರಡನೇ ಘಟನೆ ಇದಾಗಿದೆ. 2014ರ ಅಕ್ಟೋಬರ್ 20ರಂದು ಬೆಳಗ್ಗೆ 4.45ಕ್ಕೆ ಇದೇ ರೈಲಿನಲ್ಲಿ ಯುವಕ ಯುವತಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆಯೂ ನಡೆದಿತ್ತು. ಹಿಂಬದಿಯ ಐದನೇ ಬೋಗಿಯಲ್ಲಿ ಈ ಘಟನೆ ನಡೆದಿತ್ತು. ಮಲಪ್ಪುರಂನ ಕೊಂಡೊಟ್ಟಿ ಕಿತಾಂಗಲ್ಲೂರು ನಿವಾಸಿ ಫಾತಿಮತ್ (45) ತೀವ್ರ ಸುಟ್ಟಗಾಯಗಳಿಂದ ಮೃತಪಟ್ಟಿದ್ದರು.