ಕಾಸರಗೋಡು: ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ ಹಗೂ ಐಸಿಎಆರ್-ಸಿಪಿಸಿಆರ್‍ಐ ವತಿಯಿಂದ "ಹಲಸು ಮತ್ತು ಅದರ ಮಾರುಕಟ್ಟೆ ಸಾಮಥ್ರ್ಯ" ಕುರಿತು ಒಂದು ದಿನದ ಜಿಲ್ಲಾ ಮಟ್ಟದ ವಿಚಾರ ಸಂಕಿರಣ ಮತ್ತು ಪ್ರದರ್ಶನ ಮೀಯಪದವು ಚೌಟರ ಚಾವಡಿಯಲ್ಲಿ ಜರುಗಿತು. 'ಒಂದು ಜಿಲ್ಲೆ-ಒಂದು ಉತ್ಪನ್ನ'ಯೋಜನೆಯನ್ವಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಿಪಿಸಿಆರ್‍ಐ ನಿರ್ದೇಶಕ ಡಾ ಕೆ ಬಿ ಹೆಬ್ಬಾರ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯುಳ್ಳ ಬೆಳೆಯಾಗಿ ಇಂದು ಹಲಸು ಖ್ಯಾತಿ ಗಳಿಸಿದೆ. ಹಲಸಿನ ಹಣ್ಣಿನ ಆರೋಗ್ಯದಾಯಕ ಪ್ರಯೋಜನದ ಜತೆಗೆ ಹಲಸಿನ ಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳಿಗೂ ಹೆಚ್ಚಿನ ಬೇಡಿಕೆಯಿದ್ದು, ಹವಾಮಾನ ವೈಪರೀತ್ಯ ತಡೆಯುವಲ್ಲೂ ಹಲಸಿನ ಮರಗಳು ಸಹಕಾರಿಯಾಗಿದೆ. ಹಲಸಿನ ಬೆಳೆ ಬೆಳೆಯಲು ಕೃಷಿಕರು ಮುಂದೆ ಬರಬೇಕು ಎಂದು ಸಲಹೆ ನೀಡಿದರು.
ಪ್ರಗತಿಪರ ಕೃಷಿಕ, ಡಾ.ಡಿ.ಸಿ.ಚೌಟ ಹಲಸು ಉತ್ಪನ್ನಗಳ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳನ್ನು ಖರೀದಿಸುವ ಮೂಲಕ ಹಲಸು ಆಧಾರಿತ ಉದ್ದಿಮೆಯನ್ನು ಪ್ರೋತ್ಸಾಃಇಸುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.
ಈ ಸಂದರ್ಭ ಕೆವಿಕೆ ವತಿಯಿಂದ ತರಬೇತಿ ಪಡೆದ ಉದ್ಯಮಗಳಾದ ವಿಜ್ ಹಿತಾ ಆಹಾರ ಮತ್ತು ಜೋರಾಸ್ ಆಹಾರ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಯಿತು. ಮೀಂಜ ಪಂಚಾಯತ್ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಅರಣ್ಯಾಧಿಕಾರಿ ಗೇಬ್ರಿಯಲ್ ವೇಗಸ್ ಅವರಿಂದ 'ಹಲಸು ಮತ್ತು ಅದರ ಜೀವವೈವಿಧ್ಯ', ಮುಳಿಯ ಶರ್ಮಾ ಅವರಿಂದ 'ಹಲಸಿನ ಹಣ್ಣುಗಳು ಮತ್ತು ಮೌಲ್ಯವರ್ಧನೆ ಕುರಿತು ಅನುಭವ ಹಂಚಿಕೆ' ಕುರಿತು ಉಪನ್ಯಾಸ ಮತ್ತು ಚರ್ಚೆ ನಡೆಯಿತು. ಸಿಪಿಸಿಆರ್‍ಐ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಮನೋಜ್‍ಕುಮಾರ್ ಸ್ವಾಗತಿಸಿದರು. ಡಾ ಸರಿತಾ ಹೆಡ್ಗೆ ವಂದಿಸಿದರು.