ಕಾಸರಗೋಡು: ಕಾನತ್ತೂರು ಪ್ರದೇಶದಲ್ಲಿ ಮತ್ತೆ ಕಾಡಾನೆ ದಾಳಿ ನಡೆಸಿದ್ದು, ವ್ಯಾಪಕ ಕೃಷಿನಾಶವುಂಟಾಗಿದೆ. ಕಾನತ್ತೂರಿನ ಕೂಡಾಲ ಎಂಬಲ್ಲಿ ಸುಕುಮಾರನ್ ನಾಯರ್, ಕೆ.ಪಿ ಪುರುಷೋತ್ತಮನ್, ಕೆ.ವಿ ಮುರಳಿ ಎಂಬವರ ತೋಟಗಳಿಗೆ ಲಗ್ಗೆಯಿಟ್ಟಿರುವ ಆನೆ, ಅಪಾರ ಕೃಷಿನಾಶಗೈದಿದೆ. ಈ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆಯ ಆರ್‍ಆರ್‍ಟಿ ತಂಡ ಸ್ಥಳಕ್ಕಾಗಮಿಸಿ ಒಂಟಿ ಆನೆಯನ್ನು ಕಾಡಿಗೆ ಓಡಿಸಿದ್ದಾರೆ. ಕಾಡಿಗೆ ತೆರಳಲು ಹಿಂದೇಟು ಹಾಕುತ್ತಿದ್ದ ಆನೆಯನ್ನು ಬಲವಂತವಾಗಿ ಓಡಿಸಿದ್ದರೂ, ಯವುದೇ ಸಮಯ ವಾಪಸಾಗುವ ಸಾಧ್ಯತೆಯಿದೆಯೆನ್ನಲಾಗುತ್ತಿದೆ. ಗುಂಪಿನಿಂದ ಚದುರಿ ಬಂದಿರುವ ಈ ಆನೆ, ಕಳೆದ ಕೆಲವು ದಿವಸಗಳಿಂದ ಕಾನತ್ತೂರು ವಯಾಪ್ತಿಯಲ್ಲಿ ಅಲೆದಾಡುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಒಂಟಿ ಆನೆ ದಾಳಿಯಿಂದ ವ್ಯಾಪಕ ಕೃಷಿಹಾನಿಯಾಗಿದ್ದು, ಇಲ್ಲಿನ ಕೃಷಿಕರು ಕಂಗಾಲಾಗಿದ್ದಾರೆ.