ಕೊರೊನಾ ಬಳಿಕ ಹೃದಯಾಘಾತ ಹೆಚ್ಚಾಗುತ್ತಿರುವುದರಿಂದ ಹೃದಯಾಘಾತಕ್ಕೂ ಕೊರೊನಾ ಲಸಿಕೆಗೆ ಸಂಬಂಧವಿದೆಯೇ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ. ಯಾವುದೇ ಹೃದಯ ಸಮಸ್ಯೆಯಿಲ್ಲದ ಯೌವನ ಪ್ರಾಯದ, ಫಿಟ್ ಆಗಿರುವ ಎಷ್ಟೋ ಜನರಿಗೆ ಹೃದಯಾಘಾತ ಉಂಟಾಗುತ್ತಿರುವುದು ನೋಡಿದಾಗ ಜನರಿಗೆ ಆಘಾತ ಉಂಟಾಗುತ್ತಿದೆ. ಫಿಟ್ನೆಸ್ ಮೈಕಟ್ಟು ಹೊಂದಿದ್ದು, ಆರೋಗ್ಯಕರ ಆಹಾರಕ್ರಮ ಪಾಲಿಸುತ್ತಿದ್ದರಿಗೂ ಹೃದಯಾಘಾತ ಉಂಟಾಗಿದೆ. ಉದಾಹರಣೆಗೆ ನಮ್ಮ ಪುನೀತ್ ರಾಜ್‌ಕುಮಾರ್.
ಎರಡು ವರ್ಷ ಕೊರೊನಾ ರಣಕೇಕೆ ಹಾಕಿತು, ಈ ಕೊರೊನಾ ಮಹಾಮಾರಿ ನಿಯಂತ್ರಿಸಲು ಕೊರೊನಾ ಲಸಿಕೆ ನೀಡಲಾಯಿತು. ಎಲ್ಲಾ ಬಗೆಯ ಪರೀಕ್ಷೆ ಮಾಡಿ, ಕೊರೊನಾ ಲಸಿಕೆ ಸುರಕ್ಷಿತ ಎಂಬ ವರದಿ ಬಂದ ಬಳಿಕ ಜನರಿಗೆ ಕೊರೊನಾ ಲಸಿಕೆ ನೀಡಲಾಯಿತು. ಕೊರೊನಾವೂ ನಿಯಂತ್ರಣಕ್ಕೆ ಬಂತು. ಆದರೆ ಹೃದಯಾಘಾತ ವ್ಯಕ್ತಿಗಳು ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದೆ.ಹೀಗಾಗಿ ಹೃದಯಾಘಾತಕ್ಕೂ ಕೋವಿಡ್ ಲಸಿಕೆಗೂ ಏನಾದರೂ ಸಂಬಂಧವಿರಬಹುದೇ ಎಂಬ ಸಂಶಯ ಜನರಲ್ಲಿ ಕಾಡತೊಡಗಿತು. ಇದೀಗ ಐಸಿಎಂಆರ್( Indian Council of Medical Research's) ಕೂಡ ಈ ಬಗ್ಗೆ ಪರೀಕ್ಷೆ ಅಧ್ಯಯನ ಮಾಡುತ್ತಿದ್ದು ಇನ್ನೆರಡು ವಾರಗಳಲ್ಲಿ ಈ ಕುರಿತ ಅಧ್ಯಯನ ವರದಿ ಕೂಡ ಬರಲಿದೆ ಎಂದು ICMR ಜನರಲ್ ರಾಜೀವ್ ಬಹಲ್ ಹೇಳಿದ್ದಾರೆ.
ವರದಿ ಪ್ರಕಾರ ಈ ಅಧ್ಯಯನದಲ್ಲಿ ಈಗಾಗಲೇ ಕೆಲವೊಂದು ಅಂಶಗಳು ತಿಳಿದು ಬಂದಿದ್ದು ಜನರ ಮುಂದೆ ತಮ್ಮ ರಿಪೋರ್ಟ್ ವರದಿ ಇಡುವ ಮುನ್ನ ತಮ್ಮ ವರದಿಯನ್ನು ಕೂಲಂಕುಷವಾಗಿ ಪರಿಶೀಲಿಸಿ ತನ್ನ ವರದಿಯನ್ನು ಪ್ರಕಟ ಮಾಡಲಿದೆ.
ಯುವ ಪೀಳಿಗೆ ಹೃದಯಾಘಾತಕ್ಕೆ ಬಲಿಯಾಗುತ್ತಿರಲು ಕಾರಣವೇನು?
ಇತ್ತೀಚೆಗೆ ಯುವ ಜನತೆಗೆ ಹೃದಯಾಘಾತ ಉಂಟಾಗುತ್ತಿದೆ. ಶಾಲಾ ಮಕ್ಕಳು ಕೂಡ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಇತ್ತೀಚೆಗೆ ಚಿಕ್ಕಬಳ್ಳಾಪುರದಲ್ಲಿಯೇ ನಡೆದ ಘಟನೆ ನೋಡಿ, ಚಿಕ್ಕ ಬಾಲಕ, ಜಾತ್ರೆಯಲ್ಲಿ ಆಟವಾಡುತ್ತಾ ಕುಸಿದು ಬಿದ್ದು ಸಾವನ್ನಪ್ಪಿದ ಇಂಥ ಹಲವು ಪ್ರಕರಣಗಳು ಕೇಳಿ ಬರುತ್ತಿದೆ. ಮದುವೆ ಮನೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ ವರ/ವಧು ಹೀಗೆ ಕಳೆದ ಎರಡು ವರ್ಷಗಳಿಂದ ಈ ಬಗೆಯ ಪ್ರಕರಣಗಳು ತುಂಬಾನೇ ಕೇಳಿ ಬರುತ್ತಿದೆ. ಹೃದಯಾಘಾತಕ್ಕೆ ಒಳಗಾದವರು ಕೂಡ ತುಂಬಾ ದೈಹಿಕ ತೂಕ ಹೊಂದಿರುವುದಾಗಲೇ, ಈ ಹಿಂದೆ ಹೃದಯ ಸಮಸ್ಯೆ ಉಂಟಾದವರಾಗಲಿ ಆಗಿರಲಿಲ್ಲ, ಬಹುತೇಕ ಜನರಿಗೆ ಇದ್ದಕ್ಕಿದ್ದಂತೆ ಹೃದಯಾಘಾತ ಉಂಟಾಗಿ ಸಾವು ಸಂಭವಿಸುತ್ತಿದೆ. ಇದರ ಹಿಂದಿನ ನಿಜವಾದ ಕಾರಣಗಳು ತಿಳಿಯಲು ಇದೀಗ ಐಸಿಎಂಆರ್ ಬಂದಿದೆ. ಸುಮಾರು 40 ಆಸ್ಪತ್ರೆಗಳನ್ನು ಅಧ್ಯಯನಕ್ಕೆ ಒಳಪಡಿಸಲಿದೆ.
ಯುವ ಜನತೆಯಲ್ಲಿ ಹೃದಯಾಘಾತ, ನಿರ್ಲಕ್ಷ್ಯ ಮಾಡುವಂಥದ್ದಲ್ಲ
ಕೆಲವು ವರ್ಷಗಳ ಹಿಂದೆ ಒಬ್ಬ ಯುವಕ/ಯುವತಿಗೆ ಹೃದಯಾಘಾತ ಸಂಭವಿಸಿದರೆ ಇಡೀ ಆಸ್ಪತ್ರೆಯ ತಜ್ಞರು ಬಂದು ಇಷ್ಟು ಚಿಕ್ಕ ಪ್ರಾಯದಲ್ಲಿ ಹೃದಯಾಘಾತ ಉಂಟಾಗಲು ಕಾರಣವೇನು ಎಂದು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದರು, ಆದರೆ ಇತ್ತೀಚೆಗೆ ಯುವಕ, ಯುವತಿಯರಿಗೆ ಹೃದಯಾಘಾತ ಸಂಭವಿಸುತ್ತಿರುವುದು ಸಾಮಾನ್ಯವಾಗಿದೆ. ಈ ಬೆಳವಣಿಗೆ ದೇಶದ ಆರೋಗ್ಯಕರ ಸಮಾಜದ ದೃಷ್ಟಿಯಿಂದ ನಿರ್ಲಕ್ಷ್ಯ ಮಾಡುವಂಥದ್ದಲ್ಲ.
ಕೋವಿಡ್ ಸೋಂಕು ಹೃದಯಾಘಾತಕ್ಕೆ ಕಾರಣವಾಗುತ್ತಿರಬಹುದೇ?
ಕೋವಿಡ್ ದೇಶದ ಬಹುಪಾಲು ಜನತೆಯನ್ನು ಬಾಧಿಸಿತ್ತು. ಈ ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡರೂ ಇದರ ಅಡ್ಡಪರಿಣಾಮದಿಂದ ಹೃದಯಾಘಾತ ಸಂಭವಿಸುತ್ತಿರಬಹುದು, ಇದಕ್ಕೆ ಲಸಿಕೆ ಕಾರಣವಲ್ಲ ಎಂಬ ವಾದವೂ ಕೇಳಿ ಬರುತ್ತಿದೆ. ಏನೇ ಆಗಲಿ ಇನ್ನೆರಡು ವಾರಗಳಲ್ಲಿ ಐಸಿಎಂಆರ್ ವರದಿ ನಮ್ಮ ಸಂಶಯಗಳಿಗೆ ಉತ್ತರ ನೀಡಲಿದೆ.