ಕಾಸರಗೋಡು: ಪಾಲಕರ ಮೇಲಿನ ಪ್ರೀತಿ ನಮ್ಮ ವ್ಯಸನವಾಗಬೇಕೇ ಹೊರತು, ಮಾದಕ ದ್ರವ್ಯದ ದಾಸರಾಗದಂತೆ ಪ್ರತಿಯೊಬ್ಬ ವಿದ್ಯಾರ್ಥಿ ಪಣತೊಡಬೇಕು ಎಂದು ಶಾಸಕ ಎನ್.ಎ ನೆಲ್ಲಿಕುನ್ನು ತಿಳಿಸಿದ್ದಾರೆ. ಅವರು ವಿದ್ಯಾನಗರ ಸರ್ಕಾರಿ ಐಟಿಐನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ಜಿಲ್ಲಾ ಅಬಕಾರಿ ವಿಭಾಗ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಜಿಲ್ಲಾ ಮಟ್ಟದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ನಮ್ಮ ಸುತ್ತಮುತ್ತಲಿನ ಪರಿಸರವನ್ನು ವ್ಯಸನಮುಕ್ತಗೊಳಿಸಲು ನಾವು ಕಾಳಜಿ ವಹಿಸಬೇಕು. ಇಂದು ಪ್ರಾಥಮಿಕ ತರಗತಿಯ ಮಕ್ಕಳೂ ಡ್ರಗ್ಸ್ ಗ್ಯಾಂಗ್‍ಗಳ ಬಲೆಗೆ ಬೀಳುತ್ತಿರುವುದು ಆತಂಕಕಾರಿಯಾಗಿದ್ದು, ವಿದ್ಯಾರ್ಥಿಗಳು, ಯುವಕರು ಈ ಬಲೆಗೆ ಬೀಳದಂತೆ ಪೆÇೀಷಕರೂ ಜಾಗ್ರತೆ ವಹಿಸಬೇಕು ಎಂದು ತಿಳಿಸಿದರು.
ಉಪ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಆರ್.ವಂದನಾ ವಿಶೇಷ ಆಹ್ವಾನಿತರಾಗಿದ್ದರು. ಕಾಸರಗೋಡು ನಗರಸಭಾ ಸದಸ್ಯೆ ಅಸ್ಮಾ ಮುಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಅಬಕಾರಿ ಪ್ರಿವೆಂಟಿವ್ ಆಫೀಸರ್ ಎನ್.ಜಿ.ರಘುನಾಥನ್ ಮಾದಕ ದ್ರವ್ಯ ವಿರುದ್ಧ ಸಂದೇಶ ನೀಡಿದರು. ಜಿಲ್ಲಾ ವಾರ್ತಾಧಿಕಾರಿ ಎಂ.ಮಧುಸೂದನನ್, ಐಟಿಐ ಪ್ರಾಂಶುಪಾಲ ಪಿ.ವಿ.ಸುರೇಂದ್ರನ್, ಉಪ ಪ್ರಾಂಶುಪಾಲ ಎಂ.ಆರ್.ದಿನಿಲ್ ಕುಮಾರ್ ಹಾಗೂ ಪ್ರಶಿಕ್ಷಣ ಮಂಡಳಿ ಅಧ್ಯಕ್ಷ ಮುಹಮ್ಮದ್ ಶಾಹಿದ್ ಇರ್ಫಾನ್ ಉಪಸ್ಥಿತರಿದ್ದರು. ಸಹಾಯಕ ಅಬಕಾರಿ ಆಯುಕ್ತ ಹಾಗೂ ವಿಮುಕ್ತಿ ಜಿಲ್ಲಾ ವ್ಯವಸ್ಥಾಪಕ ಕೆ.ಆರ್.ಅಜಯ್ ಸ್ವಾಗತಿಸಿದರು. ಐಟಿಐ ಎನ್‍ಎಸ್‍ಎಸ್ ಕಾರ್ಯಕ್ರಮ ಅಧಿಕಾರಿ ಸಿ.ಅನಿಲ ಕುಮಾರ್ ವಂದಿಸಿದರು.