ಬಹ್ರೈಚ್: ಮದುವೆಯಾದ ಒಂದು ದಿನ ನಂತರ ನವವಿವಾಹಿತರು ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದಿಂದ ವರದಿಯಾಗಿದೆ.
Hindustan Times ವರದಿಯ ಪ್ರಕಾರ, 24 ವರ್ಷದ ಪ್ರತಾಪ್ ಯಾದವ್ ಮಂಗಳವಾರ ತನಗಿಂತ ಎರಡು ವರ್ಷ ಕಿರಿಯ ಪುಷ್ಪಾ ಅವರನ್ನು ವಿವಾಹವಾಗಿದ್ದನು.
ರಾತ್ರಿಯ ವಿವಾಹ ಮಹೋತ್ಸವದ ನಂತರ ದಂಪತಿ ಬುಧವಾರ ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿರುವ ತಮ್ಮ ಮನೆಗೆ ಮರಳಿದ್ದರು.
ಪ್ರತಾಪ್ ಮತ್ತು ಪುಷ್ಪಾ ಮದುವೆಯ ನಂತರದ ಕೆಲವು ವಿಧಿವಿಧಾನಗಳನ್ನು ನೆರವೇರಿಸಿದ ನಂತರ ತಮ್ಮ ಕೋಣೆಯಲ್ಲಿ ಮಲಗಲು ಹೋದರು ಹಾಗೂ ಗುರುವಾರ ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾರೆ.
ಅವರ ಸಾವಿನ ಹಿಂದಿನ ಕಾರಣವನ್ನು ಖಚಿತಪಡಿಸಿಕೊಳ್ಳಲು ಕೋಣೆಯನ್ನು ಪರೀಕ್ಷಿಸಲು ವಿಧಿವಿಜ್ಞಾನ ತಜ್ಞರ ತಂಡವನ್ನು ಕೂಡ ಕರೆಯಲಾಗಿದೆ ಎಂದು ವರದಿ ತಿಳಿಸಿದೆ.
ಅವರ ಮರಣೋತ್ತರ ಪರೀಕ್ಷೆಯ ವರದಿಯು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಸೂಚಿಸುತ್ತದೆ ಎಂದು ಬಲರಾಂಪುರದ ಪೊಲೀಸ್ ಅಧೀಕ್ಷಕ ಪ್ರಶಾಂತ್ ವರ್ಮಾ ಅವರನ್ನು ಉಲ್ಲೇಖಿಸಿ ವರದಿ ತಿಳಿಸಿದೆ.
ದಂಪತಿಗೆ ಯಾವುದೇ ಹೃದಯ ಸಂಬಂಧಿ ಕಾಯಿಲೆಯ ಇತಿಹಾಸವಿಲ್ಲ. ಬಲವಂತವಾಗಿ ಕೋಣೆಗೆ ಪ್ರವೇಶಿಸಿದ ಯಾವುದೇ ಲಕ್ಷಣಗಳು ಅಥವಾ ಅವರ ದೇಹದ ಮೇಲೆ ಗಾಯದ ಗುರುತುಗಳಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಂಪತಿ ಒಂದೇ ಸಮಯದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂಬ ಶವಪರೀಕ್ಷೆಯ ಫಲಿತಾಂಶ ಆತಂಕವನ್ನು ಹೆಚ್ಚಿಸಿವೆ. ಪ್ರಕರಣದ ಕುರಿತು ಕೂಲಂಕುಷ ತನಿಖೆ ನಡೆಸಲಾಗುತ್ತಿದೆ ಎಂದು ಕೈಸರ್‌ಗಂಜ್ ಪೊಲೀಸ್ ಠಾಣೆಯ ಪ್ರಭಾರಿ ಇನ್ಸ್‌ಪೆಕ್ಟರ್ ರಾಜನಾಥ್ ಸಿಂಗ್ ಹೇಳಿದರು.