ಕೋಲ್ಕತ್ತ: ಕಾಂಗ್ರೆಸ್ ಪಕ್ಷವು ಲೋಕಸಭೆಯಲ್ಲಿ ನಮ್ಮ ಬೆಂಬಲವನ್ನು ಬಯಸುವುದಾದರೆ, ಬಂಗಾಳದಲ್ಲಿ ಸಿಪಿಐ(ಎಂ) ಪಕ್ಷದಿಂದ ಅಂತರ ಕಾಯ್ದುಕೊಳ್ಳಬೇಕು ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕಿ ಮಮತಾ ಬ್ಯಾನರ್ಜಿ ಶುಕ್ರವಾರ ಸ್ಪಷ್ಟವಾಗಿ ಹೇಳಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿಯೂ ಆಗಿರುವ ಮಮತಾ, ರಾಜ್ಯದಲ್ಲಿ ಆಡಳಿತಾರೂಢ ಟಿಎಂಸಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್, ಸಿಪಿಐ(ಎಂ) ಹಾಗೂ ಬಿಜೆಪಿ ಗೌಪ್ಯ ಒಪ್ಪಂದ ಮಾಡಿಕೊಂಡಿವೆ ಎಂದು ಈ ಹಿಂದೆ ಆರೋಪಿಸಿದ್ದರು.
'ಜನರು ಇಂದು ಬಂಗಾಳದಲ್ಲಿ ಶಾಂತಿಯುತ ಜೀವನ ನಡೆಸುತ್ತಿದ್ದಾರೆ. ಆದರೆ, ನೀವು (ವಿರೋಧಿಗಳು) ಬಂಗಾಳದಲ್ಲಿ ಶಾಂತಿ ಇಲ್ಲ ಎಂದು ಹೇಳುತ್ತಿದ್ದೀರಿ. ಸಿಪಿಎಂ ಆಡಳಿತದಲ್ಲಿದ್ದಾಗ ರಾಜ್ಯದಲ್ಲಿ ಶಾಂತಿ ನೆಲೆಸಿತ್ತೇ? ಕಾಂಗ್ರೆಸ್ ಪಕ್ಷ ಹಲವು ರಾಜ್ಯಗಳಲ್ಲಿ ಆಡಳಿತ ನಡೆಸಿದೆ. ಅದು ಸಿಪಿಐ(ಎಂ) ಮತ್ತು ಬಿಜೆಪಿಯ ಬಹುದೊಡ್ಡ ಮಿತ್ರ. ನೀವು (ಕಾಂಗ್ರೆಸ್) ಲೋಕಸಭೆಯಲ್ಲಿ ಬಿಜೆಪಿ ವಿರುದ್ಧ ನಮ್ಮ ಬೆಂಬಲವನ್ನು ಕೇಳುವುದಾದರೆ, ನಾವು ಜೊತೆಗಿರುತ್ತೇವೆ. ಆದರೆ, ನೆನಪಿರಲಿ ಬಂಗಾಳದಲ್ಲಿ ಸಿಪಿಎಂ ಜೊತೆ ಮೈತ್ರಿ ಮಾಡಿಕೊಂಡು ನಮ್ಮ ಬಳಿಗೆ ಬರಬೇಡಿ' ಎಂದು ಕಟುವಾಗಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮುಂದಿನ ತಿಂಗಳು ನಡೆಯಲಿರುವ ಪಂಚಾಯಿತಿ ಚುನಾವಣೆಯ ನಾಮಪತ್ರ ಸಲ್ಲಿಕೆ ವೇಳೆ, ಗುರುವಾರ ವಿವಿಧೆಡೆ ಹಿಂಸಾಚಾರ ಭುಗಿಲೆದ್ದಿತ್ತು. ಗುಂಡೇಟಿಗೆ ಮೂವರು ಮೃತಪಟ್ಟಿದ್ದರು.
ದಕ್ಷಿಣ 24 ಪರಗಣ ಜಿಲ್ಲೆಯ ಭಾಂಗೋರ್‌ನಲ್ಲಿ ಇಬ್ಬರು ಹಾಗೂ ಉತ್ತರ ದಿನಜ್‌ಪುರ ಜಿಲ್ಲೆಯ ಛೋಪ್ರಾದಲ್ಲಿ ಯುವಕನೊಬ್ಬ ಸಾವಿಗೀಡಾಗಿದ್ದ. ಆದಾಗ್ಯೂ ರಾಜ್ಯದ ಉಳಿದ ಭಾಗಗಳಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶಾಂತಿಯುತವಾಗಿ ನಡೆದಿದೆ ಎಂದು ಮಮತಾ ಹೇಳಿಕೊಂಡಿದ್ದಾರೆ.
ಎರಡು ತಿಂಗಳಿನಿಂದ ನಡೆದ 'ತೃಣಮೂಲದಲ್ಲಿ ಹೊಸ ಅಲೆ' ಸಾಮಾವೇಶದ ಸಮಾರೋಪವನ್ನುದ್ದೇಶಿಸಿ ಮಾತನಾಡಿದ ಅವರು, 'ಪಂಚಾಯಿತಿ ಚುನಾವಣೆಯ ಶಾಂತಿಯುತ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗೆ ಸಾಕ್ಷಿಯಾದ ಪಶ್ಚಿಮ ಬಂಗಾಳಕ್ಕಿಂತ ಶಾಂತಿಯುತವಾಗಿರುವ ಇನ್ನೊಂದು ರಾಜ್ಯವಿಲ್ಲ. ವಿರೋಧ ಪಕ್ಷಗಳಾದ ಸಿಪಿಐ(ಎಂ), ಕಾಂಗ್ರೆಸ್, ಬಿಜೆಪಿಯ ಮತ್ತು ಇಂಡಿಯನ್ ಸೆಕ್ಯುಲರ್ ಫ್ರಂಟ್ (ಐಎಸ್‌ಎಫ್) ನಾಮಪತ್ರ ಸಲ್ಲಿಕೆ ವೇಳೆ ನಡೆದ ಒಂದೆರಡು ಘಟನೆಗಳನ್ನು ಮುಂದಿಟ್ಟುಕೊಂಡು ನಮ್ಮನ್ನು ಟೀಕಿಸಲು ಪ್ರಯತ್ನಿಸುತ್ತಿವೆ' ಎಂದು ಕಿಡಿಕಾರಿದ್ದಾರೆ.