ಇಂಫಾಲ: ರಾಜ್ಯದಲ್ಲಿ ಭುಗಿಲೆದ್ದ ಗಲಭೆ ಕುರಿತು ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಲಾಗುವುದು ಹಾಗೂ ರಾಜ್ಯಪಾಲರಾದ ಅನಸೂಯಾ ಉಯಿಕೆ ನೇತೃತ್ವದಲ್ಲಿ ಶಾಂತಿ ಸಮಿತಿಯೊಂದನ್ನು ರಚಿಸಲಾಗುವುದು ಎಂದು ಕೇಂದ್ರ ಸರ್ಕಾರ ಗುರುವಾರ ಹೇಳಿದೆ.
ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಮಾಡುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ನ್ಯಾಯಾಂಗ ತನಿಖೆ ಹಾಗೂ ಶಾಂತಿ ಸಮಿತಿ ರಚನೆ ಕುರಿತು ಶೀಘ್ರವೇ ಪ್ರಕಟಣೆ ಹೊರಡಿಸಲಾಗುವುದು ಎಂದು ಹೇಳಿದರು.
'ರಾಜ್ಯಪಾಲರ ನೇತೃತ್ವದ ಶಾಂತಿ ಸಮಿತಿಯಲ್ಲಿ ಕುಕಿ ಮತ್ತು ಮೈತೇಯಿ ಸಮುದಾಯಗಳ ಪ್ರತಿನಿಧಿಗಳಲ್ಲದೇ, ಎಲ್ಲ ರಾಜಕೀಯ ಪಕ್ಷಗಳು, ಸಾಮಾಜಿಕ ಸಂಘಟನೆಗಳ ಪ್ರತಿನಿಧಿಗಳು ಕೂಡ ಇರುವರು' ಎಂದು ವಿವರಿಸಿದರು.
'ರಾಜ್ಯದಲ್ಲಿನ ಐದು ಕ್ರಿಮಿನಲ್ ಪಿತೂರಿಗಳು ಹಾಗೂ ಒಂದು ಸಂಚಿನ ಪ್ರಕರಣ ಕುರಿತು ಸಿಬಿಐನಿಂದ ತನಿಖೆ ನಡೆಸಲಾಗುವುದು' ಎಂದೂ ಮಾಹಿತಿ ನೀಡಿದರು.
'ಮಣಿಪುರದಲ್ಲಿ ಉದ್ಭವಿಸಿರುವ ಸಮಸ್ಯೆಗೆ ಮಾತುಕತೆಯೊಂದೇ ಪರಿಹಾರ ನೀಡಬಲ್ಲದು. ಹಿಂಸಾಚಾರ ತಾತ್ಕಾಲಿಕವಾದುದು. ಒಂದೊಮ್ಮೆ ತಪ್ಪು ತಿಳಿವಳಿಕೆಗಳು ದೂರವಾದಾಗ ಪರಿಸ್ಥಿತಿ ತಿಳಿಯಾಗುವುದು' ಎಂದರು.
'ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು ಆರು ವರ್ಷಗಳಾಗಿದ್ದು, ಈ ಅವಧಿಯಲ್ಲಿ ರಾಜ್ಯವು ಬಂದ್, ಕರ್ಫ್ಯೂಗಳಿಂದ ಮುಕ್ತವಾಗಿದ್ದನ್ನು ಖಾತ್ರಿಪಡಿಸಲಾಗಿತ್ತು. ಆದರೆ, ಈಗ ಭುಗಿಲೆದ್ದಿರುವ ಗಲಭೆಗೆ ತಪ್ಪು ತಿಳಿವಳಿಕೆಗಳು ಹಾಗೂ ಅವಸರದ ತೀರ್ಮಾನಗಳೇ ಕಾರಣ' ಎಂದು ವಿಶ್ಲೇಷಿಸಿದರು.
'ಕುಕಿ ಹಾಗೂ ಮೈತೇಯಿ ಸಮುದಾಯಗಳ ಜನರು ಆಶ್ರಯ ಪಡೆದಿರುವ ಶಿಬಿರಗಳಿಗೆ ಭೇಟಿ ನೀಡಿದ್ದೇನೆ. ಶಾಂತಿ ಸ್ಥಾಪನೆ ಪ್ರಯತ್ನದ ಭಾಗವಾಗಿ ಎರಡೂ ಸಮುದಾಯಗಳ ಗುಂಪುಗಳೊಂದಿಗೆ ಚರ್ಚಿಸಿದ್ದೇನೆ' ಎಂದು ಹೇಳಿದರು.
ಗಡಿ ಸಮಸ್ಯೆ:
ಮ್ಯಾನ್ಮಾರ್‌ಗೆ ಹೊಂದಿಕೊಂಡಿರುವ ಗಡಿ ಮೂಲಕ ಮಾದಕ ವಸ್ತುಗಳ ಕಳ್ಳಸಾಗಣೆ ನಡೆಯುತ್ತಿದೆ. ಬಂಡುಕೋರರು ಸಹ ನುಸುಳುತ್ತಿದ್ದಾರೆ ಎಂಬ ಆತಂಕ ಇದೆ. ಈ ಹಿನ್ನೆಲೆಯಲ್ಲಿ, ನೆರೆಯ ದೇಶಗಳಿಂದ ಬರುವವರ ಬಯೋಮೆಟ್ರಿಕ್ ವಿವರಗಳನ್ನು ಸಂಗ್ರಹಿಸಲು ಆರಂಭಿಸಲಾಗಿದೆ ಎಂದು ತಿಳಿಸಿದರು.
ಮೂವರು ಪೊಲೀಸರಿಗೆ ಗಾಯ:
ವಿಷ್ಣುಪುರ ಜಿಲ್ಲೆಯಲ್ಲಿ ಶಂಕಿತ ಕುಕಿ ಬಂಡುಕೋರರೊಂದಿಗೆ ಬುಧವಾರ ರಾತ್ರಿ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಪೊಲೀಸರಿಗೆ ಗಾಯಗಳಾಗಿವೆ ಎಂದು ಪೊಲೀಸರು ಗುರುವಾರ ಹೇಳಿದ್ದಾರೆ. ಕುಂಬಿ ಪೊಲೀಸ್ ಠಾಣೆ ವ್ಯಾಪ್ತಿಯ ತಾಂಗ್‌ಜೆಂಗ್‌ನಲ್ಲಿ ಗುಂಡಿನ ಚಕಮಕಿ ನಡೆದಿದೆ. ಗಾಯಗೊಂಡಿರುವವರನ್ನು ಇಂಫಾಲದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಮಿತ್ ಶಾಅಮಿತ್ ಶಾ, ಕೇಂದ್ರ ಗೃಹ ಸಚಿವಗಡಿಯಲ್ಲಿ ಬೇಲಿ ಅಳವಡಿಸುವ ಕಾರ್ಯವನ್ನು ಪೂರ್ಣಗೊಳಿಸಿದರೆ ಮಾತ್ರ ಭಾರತ ಮತ್ತು ಮ್ಯಾನ್ಮಾರ್ ಗಡಿ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ ಸಿಗಲಿದೆ.ಹಿಂಸಾಗ್ರಸ್ತ ಮಣಿಪುರದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಪೊಲೀಸ್ ಇಲಾಖೆಯಲ್ಲಿಯೂ ಸರ್ಕಾರ ಕೆಲ ಬದಲಾವಣೆ ಮಾಡಿದೆ. ಹಿರಿಯ ಐಪಿಎಸ್ ಅಧಿಕಾರಿ ರಾಜೀವ್ ಸಿಂಗ್ ಅವರನ್ನು ಮಣಿಪುರದ ಡಿಜಿಪಿಯಾಗಿ ಗುರುವಾರ ನೇಮಕ ಮಾಡಲಾಗಿದೆ. 1987ರ ಬ್ಯಾಚ್‌ನ ಮಣಿಪುರ ಕೇಡರ್ ಅಧಿಕಾರಿ ಪಿ.ಡೌಂಗಲ್ ಈ ಮೊದಲು ಡಿಜಿಪಿಯಾಗಿದ್ದರು. ಅವರನ್ನು ಗೃಹ ಇಲಾಖೆಯಲ್ಲಿ ವಿಶೇಷ ಕರ್ತವ್ಯಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಈ ತಿಂಗಳಾಂತ್ಯಕ್ಕೆ ಅವರು ನಿವೃತ್ತರಾಗಲಿದ್ದಾರೆ. ತ್ರಿಪುರಾ ಕೇಡರ್ ಅಧಿಕಾರಿಯಾಗಿರುವ ಸಿಂಗ್ ಅವರನ್ನು ಮೂರು ವರ್ಷಗಳ ಅವಧಿಗೆ ಡಿಜಿಪಿಯಾಗಿ ನೇಮಕ ಮಾಡಲಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ವಿಶೇಷ ಪ್ರಕರಣವೆಂದು ಪರಿಗಣಿಸಿ ಈ ನೇಮಕ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.ರಾಜೀವ್ ಸಿಂಗ್ ನೂತನ ಡಿಜಿಪಿ