ನವದೆಹಲಿ: ಬಾಹ್ಯಶಕ್ತಿಗಳ ಹಸ್ತಕ್ಷೇಪಕ್ಕೆ ಅವಕಾಶವಾಗದ ರೀತಿ ರೈಲ್ವೆ ನೆಟ್‌ವರ್ಕ್ ರೂಪಿಸಲು ಯೋಜನೆ ತಯಾರಿಸಬೇಕು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಂಗಳವಾರ ಅಧಿಕಾರಿಗಳಿಗೆ ಸೂಚಿಸಿದರು.
ಬಾಲೇಶ್ವರದಲ್ಲಿ ಹಳಿ ಮರುಸ್ಥಾಪನೆ ಪ್ರಕ್ರಿಯೆಯ ಪರಿಶೀಲನೆ ಬಳಿಕ ರಾಜಧಾನಿಗೆ ಮರಳಿದ ಅವರು, ರೈಲ್ವೆ ಮಂಡಳಿ ಸದಸ್ಯರು ಹಾಗೂ ವಲಯ ಮಟ್ಟದ ವಿವಿಧ ಅಧಿಕಾರಿಗಳ ಜೊತೆಗೆ ಸುದೀರ್ಘ ಸಭೆ ನಡೆಸಿದರು.
ತನಿಖೆ -ಭಿನ್ನಮತ ಸೂಚಿಸಿ ಪತ್ರ: ರೈಲು ದುರಂತ ಕುರಿತಂತೆ ತನಿಖೆಗೆ ರೈಲ್ವೆ ಸಚಿವಾಲಯ ರಚಿಸಿದ್ದ ಐವರು ಸದಸ್ಯರ ತನಿಖಾ ಸಮಿತಿಯ ಒಬ್ಬ ಸದಸ್ಯರು, ಕೆಲವೊಂದು ಅಂಶಗಳಿಗೆ ಭಿನ್ನಾಭಿಪ್ರಾಯ ಸೂಚಿಸಿ ಹೇಳಿಕೆ ದಾಖಲಿಸಿದ್ದಾರೆ. ಅಪಘಾತದ ಬಳಿಕ ಸಮಿತಿ ರಚಿಸಿದ್ದ ಸಚಿವಾಲಯ 24 ಗಂಟೆಯಲ್ಲಿ ವರದಿ ಸಲ್ಲಿಸಲು ಸೂಚಿಸಿತ್ತು.
ಬಾಲೇಶ್ವರ ಸಿಗ್ನಲಿಂಗ್ ವಿಭಾಗದ ಹಿರಿಯ ಸೆಕ್ಷನ್ ಮ್ಯಾನೇಜರ್ ಆಗಿರುವ ಎ.ಕೆ.ಮಹಂತಾ ಭಿನ್ನಮತ ಸೂಚಿಸಿ ಹೇಳಿಕೆ ದಾಖಲಿಸಿದ್ದಾರೆ. ವರದಿಯ 17ಎ ಅಂಶವಾದ ಲೆವೆಲ್ ಕ್ರಾಸಿಂಗ್‌ಗೂ ಮೊದಲೇ ಗೇಟ್ 94ರ ರೈಲು ಹಳಿತಪ್ಪಿದೆ ಎಂಬುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
17ಎ ಅಂಶದ ಪ್ರಕಾರ, ಸ್ವಿಚ್ (ರೈಲು ಚಲಿಸುವ ದಿಕ್ಕು ನಿರ್ಧರಿಸುವುದು) ಅನ್ನು ಲೂಪ್ ಲೇನ್‌ಗೆ ಹೊಂದಾಣಿಸಿದ್ದು, ಕೋರೊಮಂಡಲ್ ಎಕ್ಸ್‌ಪ್ರೆಸ್ ಅದರಂತೆಯೇ ಗಂಟೆಗೆ 128 ಕಿ.ಮೀ. ವೇಗದಲ್ಲಿ ಲೂಪ್‌ಲೇನ್‌ಗೆ ಪ್ರವೇಶಿಸಿದೆ. ಅಂಕಿ ಅಂಶ ಮಾಹಿತಿ ಅಥವಾ ರೈಲು ನಿರ್ವಹಣೆಯ ಕಪ್ಪುಪೆಟ್ಟಿಗೆ ಮಾಹಿತಿ ಇಲ್ಲಿ ಮಹತ್ವದ್ದಾಗಿದೆ ಎಂದು ಹೇಳಿದ್ದಾರೆ.