ಇಂಫಾಲ್: ಹಿಂಸಾಚಾರದಿಂದ ನಲುಗಿರುವ ಮಣಿಪುರದ ಇಂಫಾಲ್‌ನಲ್ಲಿ ಗುರುವಾರ ಗುಂಪೊಂದು ಹಲವು ಮನೆಗಳಿಗೆ ಬೆಂಕಿ ಹಚ್ಚಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಖಾಮೆನ್‌ಲೋಕ್ ಪ್ರದೇಶದ ಗ್ರಾಮವೊಂದರಲ್ಲಿ ಶಂಕಿತ ಬಂಡುಕೋರರು ನಡೆಸಿದ ದಾಳಿಯಲ್ಲಿ 9 ಮಂದಿ ಮೃತಪಟ್ಟ ಮರುದಿನ ಮತ್ತೆ ಗಲಭೆ ಮರುಕಳಿಸಿದೆ ಎಂದೂ ಹೇಳಿದ್ದಾರೆ.
ಇಂಫಾಲ್‌ನ ಚೆಕೋನ್‌ನಲ್ಲಿ ಗಲಭೆಕೋರರನ್ನು ನಿಯಂತ್ರಿಸಲು ಭದ್ರತಾಪಡೆಗಳು ಅಶ್ರುವಾಯು ಷೆಲ್ ಸಿಡಿಸಿವೆ. ಅಸ್ಸಾಂ ರೈಫಲ್ಸ್ ಮತ್ತು ಸೇನೆಯು ಗಲಭೆಪೀಡಿತ ಪ್ರದೇಶಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಕಾರ್ಯಾಚರಣೆ ತೀವ್ರಗೊಳಿಸಿರುವ ನಡುವೆಯೇ ಮತ್ತೆ ಹಿಂಸಾಚಾರ ನಡೆದಿದೆ ಎಂದೂ ವಿವರಿಸಿದ್ದಾರೆ.
'ಹಿಂಸಾಚಾರ ನಡೆದಿರುವ ಪ್ರದೇಶಗಳಲ್ಲಿ ಸೇನೆ ಮತ್ತು ಅಸ್ಸಾಂ ರೈಫಲ್ಸ್‌ನ ಯೋಧರು ಕಟ್ಟೆಚ್ಚರ ವಹಿಸಿದ್ದಾರೆ' ಎಂದು ಸೇನೆಯು ಟ್ವೀಟ್ ಮಾಡಿದೆ.
ಮೊಬೈಲ್ ಮತ್ತು ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ ಸೇವೆಯನ್ನು ಜೂನ್ 20ರ ವರೆಗೆ ನಿರ್ಬಂಧಿಸಿ ರಾಜ್ಯ ಗೃಹ ಇಲಾಖೆಯು ಆದೇಶ ಹೊರಡಿಸಿದೆ.
ಸಚಿವೆ ಮನೆಗೆ ಬೆಂಕಿ:
ಇಂಫಾಲ್‌ನ ಪಶ್ಚಿಮ ಜಿಲ್ಲೆಯ ಲ್ಯಾಂಫೆಲ್ ಪ್ರದೇಶದಲ್ಲಿರುವ ಮಣಿಪುರದ ಸಚಿವೆ ನೆಮ್ಚಾ ಕಿಪ್ಗೆನ್ ಅವರ ಸರ್ಕಾರಿ ಬಂಗಲೆಗೆ ಬುಧವಾರ ರಾತ್ರಿ ದುಷ್ಕರ್ಮಿಗಳ ಗುಂಪೊಂದು ಬೆಂಕಿ ಹಚ್ಚಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವೇಳೆ ಬಂಗಲೆಯಲ್ಲಿ ಯಾರೂ ಇರಲಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ ಎಂದೂ ಹೇಳಿದ್ದಾರೆ. ಯಾವುದೇ ಗುಂಪುಗಳು ಈ ಕೃತ್ಯದ ಹೊಣೆ ಹೊತ್ತುಕೊಂಡಿಲ್ಲ.
ಸುಪ್ರೀಂ ಕೋರ್ಟ್‌ಗೆ ಅರ್ಜಿ
ಕೇಂದ್ರ ಸರ್ಕಾರ ಮತ್ತು ಮಣಿಪುರದ ಮುಖ್ಯಮಂತ್ರಿ ಜಂಟಿಯಾಗಿ ಈಶಾನ್ಯ ರಾಜ್ಯದಲ್ಲಿ ಕುಕಿ ಸಮುದಾಯದವರ 'ಜನಾಂಗೀಯ ಶುದ್ಧೀಕರಣ' ಗುರಿಯನ್ನು ಹೊಂದಿರುವ ಕೋಮುವಾದಿ ಕಾರ್ಯಸೂಚಿಯನ್ನು ಆರಂಭಿಸಿದೆ ಎಂದು 'ದಿ ಮಣಿಪುರ ಟ್ರೈಬಲ್ ಫೋರಂ' ಸಂಘಟನೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಅಲ್ಪಸಂಖ್ಯಾತ ಕುಕಿ ಸಮುದಾಯದವರಿಗೆ ಸೇನೆಯ ಮೂಲಕ ರಕ್ಷಣೆ ನೀಡಬೇಕು ಎಂದೂ ಅರ್ಜಿಯಲ್ಲಿ ಕೋರಿದೆ.
ಹಿಂಸಾಚಾರ ತಕ್ಷಣ ನಿಲ್ಲಿಸಿ:
ಮಣಿಪುರ ಹಿಂಸಾಚಾರದಿಂದ ಸಮಾಜಕ್ಕೆ ದೊಡ್ಡ ನಷ್ಟವಾಗಿದೆ ಎಂದಿರುವ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ರಾಜ್ಯದಲ್ಲಿ ಶಾಂತಿ ಕಾಪಾಡಬೇಕೆಂದು ಮನವಿ ಮಾಡಿದೆ.
ನಾವು ಈಗಾಗಲೇ ಮಣಿಪುರದಲ್ಲಿ ಪರಿಹಾರ ಕಾರ್ಯದಲ್ಲಿ ಪಾಲ್ಗೊಂಡಿದ್ದೇವೆ ಮತ್ತು ಅದನ್ನು ಮುಂದುವರಿಸಲಿದ್ದೇವೆ ಎಂದು ವಿಎಚ್‌ಪಿ ಟ್ವೀಟ್ ಮಾಡಿದೆ.
ಎನ್‌ಐಎ ತನಿಖೆಗೆ ಕಾಂಗ್ರೆಸ್ ಆಗ್ರಹ:
ಮಣಿಪುರದಲ್ಲಿ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿಯು ಭಯೋತ್ಪಾದಕರ ಜೊತೆ ಕೈಜೋಡಿಸಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಈ ಕುರಿತು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತನಿಖೆ ನಡೆಸಬೇಕು ಎಂದು ಗುರುವಾರ ಆಗ್ರಹಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಮಣಿಪುರಕ್ಕೆ ಭೇಟಿ ನೀಡಬೇಕು ಮತ್ತು ಸರ್ವ ಪಕ್ಷಗಳ ನಿಯೋಗವನ್ನು ಕರೆದೊಯ್ಯಬೇಕು ಎಂದೂ ಒತ್ತಾಯಿಸಿದೆ.
ಬಿಜೆಪಿಯು ಯುನೈಟೆಡ್ ಕುಕಿ ಲಿಬರೇಷನ್ ಫ್ರಂಟ್‌ನ ಸಹಾಯ ಪಡೆದುಕೊಂಡಿದೆ ಎಂದು ಕಾಂಗ್ರೆಸ್ ಮುಖಂಡ ಅಜಯ್ ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಚುನಾವಣೆ ವೇಳೆ ಬಿಜೆಪಿ ಅಭ್ಯರ್ಥಿಗಳಿಗೆ ಸಹಾಯ ಮಾಡುವುದಾಗಿ ಯುನೈಟೆಡ್ ಕುಕಿ ಲಿಬರೇಷನ್ ಫ್ರಂಟ್‌ನ ಮುಖ್ಯಸ್ಥ ಎಸ್.ಎಸ್. ಹಾಕಿಪ್ ಅವರು ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ಬರೆದಿರುವ ಪತ್ರದ ಬಗ್ಗೆಯೂ ಅಜಯ್ ಕುಮಾರ್ ಅವರು ಉಲ್ಲೇಖಿಸಿದ್ದಾರೆ.
ಕರಾಳ ನೆನಪು ಮೆಲುಕು ಹಾಕಿದ ವಿದ್ಯಾರ್ಥಿನಿಯರು:
ಗಲಭೆಪೀಡಿತ ಪ್ರದೇಶದಿಂದ ಪಾರಾಗಿ ಬಂದಿರುವ ಮಣಿಪುರ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರು ತಾವು ಕಣ್ಣಾರೆ ಕಂಡಿರುವ ಘಟನೆಗಳನ್ನು ಮೆಲುಕು ಹಾಕಿದ್ದಾರೆ.
'ಮೇ 3ರಂದು ಆಯುಧಧಾರಿಗಳಾದ ಸುಮಾರು 40 ಮಂದಿಯ ತಂಡ ವಿದ್ಯಾರ್ಥಿನಿಯರಿದ್ದ ವಸತಿನಿಲಯದೊಳಗೆ ಪ್ರವೇಶಿಸಿ ವಾಹನಗಳಿಗೆ ಬೆಂಕಿ ಹಚ್ಚಿತ್ತು. ಕಲ್ಲೆಸೆದು ಕಟ್ಟಡದ ಕಿಟಕಿ ಗಾಜುಗಳಿಗೂ ಹಾನಿ ಎಸಗಿತ್ತು. ನಾವು ಸ್ನಾನದ ಕೋಣೆಯಲ್ಲಿ ಅಡಗಿ ಪಾರಾದೆವು' ಎಂದು ದೆಹಲಿಯಲ್ಲಿ ಸಂಬಂಧಿಕರ ಜೊತೆ ನೆಲೆಸಿರುವ ಮಣಿಪುರ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿನಿ ಕಿಮ್ಜಾಲಿ ಟೌತಾಂಗ್ ತಿಳಿಸಿದ್ದಾರೆ.