ಪಾಲಕ್ಕಾಡ್: ವಿವಾಹ ಸಂದರ್ಭದ ವೇಳೆ ವಧು-ವರರ ನಡುವೆ ಘರ್ಷಣೆ ನಡೆದ ಘಟನೆಯಲ್ಲಿ ಮಹಿಳಾ ಆಯೋಗ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಘಟನೆ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಕೊಲ್ಲಂಗೋಡು ಪೋಲೀಸರಿಗೆ ಆಯೋಗ ಸೂಚಿಸಿದೆ.
ಕಳೆದ ಜೂನ್ 25 ರಂದು ಪಲ್ಲಾಶನ ಮೂಲದ ಸಚಿನ್ ಮತ್ತು ಕೋಝಿಕೋಡ್ ಮೂಲದ ಸಜ್ಲಾ ವಿವಾಹವಾಗಿದ್ದರು. ವಿವಾಹ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಸಂಬಂಧಿಕರೊಬ್ಬರು ಪರಸ್ಪರ ವಧೂ-ವರರ ತಲೆ ಕುಟ್ಟಿಸಿದ್ದರು. ಬಳಿಕ ಅದರ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದವು. ಇದನ್ನು ಆಧರಿಸಿ ಮಹಿಳಾ ಆಯೋಗ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ. ಡಿಕ್ಕಿಯ ರಭಸಕ್ಕೆ ನೋವಿನಿಂದ ನರಳುತ್ತಿದ್ದ ವಧು ತಲೆ ಮೇಲೆ ಕೈಯಿಟ್ಟು ಅಳುತ್ತಾ ಮನೆಯೊಳಗೆ ತೆರಳುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿತ್ತು.