ಪೋಷಕರು, ಮಕ್ಕಳು ಹುಟ್ಟಿದಾಗಿನಿಂದ ಹಿಡಿದು ಅವರು ದೊಡ್ಡವರಾಗುವ ತನಕ ಅವರ ಭವಿಷ್ಯಕ್ಕಾಗಿ ಲಕ್ಷಾಂತರ ರೂಪಾಯಿ ವ್ಯಯಿಸುತ್ತಾರೆ. ಅದ್ರಲ್ಲೂ ಮುಖ್ಯವಾಗಿ ಮಕ್ಕಳ ಓದಿಗಾಗಿ ಲಕ್ಷಾಂತರ ರೂಪಾಯಿ ದುಡ್ಡು ಸುರಿಯುತ್ತಾರೆ. ಆದ್ರೆ ಓದೆಲ್ಲಾ ಮುಗಿದು ಇನ್ನೇನು ಕೆಲಸ ಸಿಗಬೇಕು ಅನ್ನುವಷ್ಟರಲ್ಲಿ ಸಾವಿರಾರು ಅಡ್ಡಿ ಆತಂಕಗಳು. ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಕೆಲವೊಂದು ಸಂದರ್ಭಗಳಲ್ಲಿ ಕೆಲಸ ಸಿಗದಂತಾಗುತ್ತದೆ. ಇನ್ನೇನು ಕೆಲಸ ಸಿಕ್ಕೇ ಬಿಡ್ತು ಅನ್ನೋವಾಗ ಏನಾದ್ರು ವಿಘ್ನ ಎದುರಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗುತ್ತದೆ.
ಈಗಿನ ಯುವ ಜನತೆಗಂತೂ ಓದಿದ ನಂತರ ಒಂದು ಸರಿಯಾದ ಉದ್ಯೋಗ ಹುಡುಕುವುದೇ ಕಷ್ಟ ಎಂಬಂತಾಗಿದೆ. ಒಂದು ವೇಳೆ ಕೆಲಸ ಸಿಕ್ಕಿದರೂ ಅದ್ರಿಂದ ತೃಪ್ತಿ ಸಿಗೋದಿಲ್ಲ. ಓದಿರೋದಕ್ಕೂ ಹಾಗೂ ಮಾಡುತ್ತಿರುವ ಕೆಲಸಕ್ಕೂ ಸಂಬಂಧವೇ ಇಲ್ಲದಂತಾಗಿ ಬಿಡುತ್ತದೆ. ಅಷ್ಟಕ್ಕು ಈಗಿನ ಯುವ ಜನತೆ ಕೆಲಸವಿಲ್ಲದೇ ಒದ್ದಾಡುತ್ತಿರೋದು ಯಾಕೆ? ಓದಿದರೂ ಕೂಡ ಕೆಲಸ ಸಿಗದೇ ಇರೋದಕ್ಕೆ ಕಾರಣ ಏನು ಅನ್ನೋದನ್ನು ತಿಳಿಯೋಣ.
1. ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆ ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಓದಿದವರು ಲಕ್ಷಾಂತರ ಮಂದಿ ಇದ್ದಾರೆ. ಇಲ್ಲಿ ಕೆಲವೇ ಕೆಲವು ಹುದ್ದೆಗಳಿಗೆ ಏಕ ಕಾಲದಲ್ಲಿ ಲಕ್ಷಾಂತರ ಮಂದಿ ಅರ್ಜಿ ಸಲ್ಲಿಸುತ್ತಾರೆ. ಹೀಗಾಗಿ ಅಲ್ಲಿ ಸ್ಪರ್ಧೆ ಹೆಚ್ಚಾಗಿರುತ್ತದೆ. ಈ ಸ್ಪರ್ಧೆಯಲ್ಲಿ ಕೆಲವೇ ಕೆಲವು ಜನ ಮಾತ್ರ ಕೆಲಸ ಗಿಟ್ಟಿಸಿಕೊಳ್ಳೋದಕ್ಕೆ ಶಕ್ತರಾಗುತ್ತಾರೆ. ಇನ್ನುಳಿದವರು ಕೌಶಲ್ಯವಿದ್ರೂ ಕೂಡ ಕೆಲಸ ಪಡೆದುಕೊಳ್ಳೋದ್ರಲ್ಲಿ ಹಿಂದೆ ಬೀಳ್ತಾರೆ. ಒಂದು ಸಂಸ್ಥೆಯಲ್ಲಿ ಎಷ್ಟು ಪೋಸ್ಟ್ ಗಳಿದೆ ಅಷ್ಟು ಜನರಿಗೆ ಮಾತ್ರ ಕೆಲಸ ಕೊಡಿಸೋದಕ್ಕೆ ಸಾಧ್ಯ. ಉಳಿದವರು ಖಾಲಿ ಕೂರಲೇಬೇಕು
2. ಅನುಭವದ ಕೊರತೆ ಕೆಲಸ ಸಿಗದೇ ಇರೋದಕ್ಕೆ ಮತ್ತೊಂದು ಕಾರಣ ಅಂದ್ರೆ ಅನುಭವದ ಕೊರತೆ. ಇತ್ತೀಚಿನ ದಿನಗಳಲ್ಲಿ ಫ್ರೆಶರ್ಸ್ ಗಿಂತ ಹೆಚ್ಚಾಗಿ ಅನುಭವಸ್ಥರೇ ಬೇಕು ಅಂತ ಕೇಳುತ್ತಾರೆ. ಅನುಭವ ಇದ್ದವರಿಗೆ ಮಾತ್ರ ಇತ್ತೀಚಿನ ದಿನಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ಇನ್ನೊಂದು ಕಡೆಯಲ್ಲಿ ಅನುಭವ ಇದ್ರೂ ಕೂಡ ಇದ್ರ ಜೊತೆ ಏನೆಲ್ಲಾ ಕೌಶಲ್ಯಗಳು ಇದೇ ಅನ್ನೋದನ್ನು ನೋಡ್ತಾರೆ. ಒಟ್ನಲ್ಲಿ ಕೆಲಸ ಕೊಡುವವರು ಅಳೆದು-ತೂಗಿ, ಲೆಕ್ಕಾಚಾರ ಹಾಕಿ ನಂತರ ಕೆಲಸ ಕೊಡುತ್ತಾರೆ.
3. ಅಸಮರ್ಪಕ ನೆಟ್‌ವರ್ಕಿಂಗ್ ನೆಟ್‌ವರ್ಕಿಂಗ್ ಇಲ್ಲದೆ ಕೆಲಸ ಹುಡುಕುತ್ತೀವಿ ಎಂದರೆ ಅದು ಕಷ್ಟದ ಕೆಲಸವೇ ಸರಿ. ನೆಟ್‌ವರ್ಕಿಂಗ್ ಜನರಿಗೆ ಅವರ ಕ್ಷೇತ್ರಕ್ಕೆ ಸಂಬಂಧಪಟ್ಟ ಕೆಲಸಗಳನ್ನು ಹುಡುಕಾಡೋದಿಕ್ಕೆ ಸಹಾಯ ಮಾಡುತ್ತದೆ. ಮೊದಲಿಗೆ ನೀವು ಉದ್ಯೋಗವಕಾಶಗಳು ಮತ್ತು ಯಾವ ಕ್ಷೇತ್ರದಲ್ಲಿ ಹೆಚ್ಚಿನ ಸಂಭಳವನ್ನು ನೀಡುತ್ತಾರೆ ಅನ್ನೋದನ್ನು ತಿಳಿದುಕೊಳ್ಳಿ. ಅದಕ್ಕೆ ಸಂಬಂಧಪಟ್ಟ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸಿಕೊಳ್ಳಿ. ಸರಿಯಾದ ನೆಟ್‌ವರ್ಕಿಂಗ್ ನ ಹೊರತಾಗಿ ಕೆಲಸ ಹುಡುಕುವುದು ತುಂಬಾನೇ ಕಷ್ಟ.
4. ನಿಮ್ಮ ಅರ್ಜಿಗಳು ಅತ್ಯತ್ತಮವಾಗಿರಲಿ ಕೆಲವೊಂದು ಸಲ ಏನಾಗುತ್ತೆ ಎಂದರೆ ನಮಗೆ ಯಾವುದೇ ರೀತಿಯ ಸಂದರ್ಶನ ಇಲ್ಲದೇನೇ ನಮ್ಮನ್ನು ರಿಜೆಕ್ಟ್ ಮಾಡುತ್ತಾರೆ. ಕಾರಣ ನಾವು ಸಲ್ಲಿಸಿರೋ ರೆಸ್ಯೂಮ್. ಯಾವತ್ತೂ ನಮ್ಮ ರೆಸ್ಯೂಮ್ ಉತ್ತಮವಾಗಿರಬೇಕು. ರೆಸ್ಯೂಮ್ ನ ಮುಖ ಪುಟ, ನಮ್ಮ ಕೌಶಲ್ಯಗಳು, ಅರ್ಹತೆಗಳು, ಸಾಧನೆಗಳ ಬಗ್ಗೆ ಸರಿಯಾಗಿ ಉಲ್ಲೇಖಿಸಿರಬೇಕು. ರೆಸ್ಯೂಮ್ ಚೆನ್ನಾಗಿಲ್ಲದಿದ್ದರೆ ನಿಮ್ಮ ಬಗ್ಗೆ ಅವರಿಗೆ ಮೂಡುವ ಮೊದಲ ಅಭಿಪ್ರಾಯವೇ ಚೆನ್ನಾಗಿರೋದಿಲ್ಲ.
5. ಸಂದರ್ಶನ ಅನೇಕ ಜನರಿಗೆ ಹೇಗಾಗುತ್ತೆ ಎಂದರೆ ಅವರಲ್ಲಿ ಉತ್ತಮ ಕೌಶಲ್ಯವಿರುತ್ತದೆ. ಅವರ ಕಾಲೇಜು ಫಲಿತಾಂಶಗಳು ಉತ್ತಮವಾಗಿರುತ್ತದೆ. ಆದರೆ ಬೇರೆಯವರ ಮುಂದೆ ನಿಂತು ಮಾತನಾಡುವ ದೈರ್ಯ ಇರೋದಿಲ್ಲ. ಹೀಗಾಗಿ ಸಂದರ್ಶನದ ಸಮಯದಲ್ಲಿ ಅವರು ರಿಜೆಕ್ಟ್ ಆಗುವ ಸಾಧ್ಯತೆ ಇರುತ್ತದೆ. ಹೀಗಾಗಿ ನಿಮಗೆ ಎಷ್ಟು ಗೊತ್ತಿದೆ ಅದನ್ನು ತುಂಬಾನೇ ಆತ್ಮವಿಶ್ವಾಸದಿಂದ ಸಂದರ್ಶಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ. ಖಂಡಿತ ನೀವು ಆಯ್ಕೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಎಷ್ಟು ಪ್ರಯತ್ನ ಪಟ್ಟರೂ ಕೂಡ ಕೆಲಸ ಸಿಗುತ್ತಿಲ್ಲವೆಂದು ಅನೇಕ ಜನರು ನೋವು ಪಟ್ಟುಕೊಂಡಿದಿದೆ. ನಾವು ಮಾಡುವ ಸಣ್ಣ ಪುಟ್ಟ ತಪ್ಪುಗಳು ನಮಗೆ ಸಿಗುವ ಕೆಲಸವನ್ನು ತಪ್ಪಿಸಿ ಬಿಡುತ್ತದೆ. ಹೀಗಾಗಿ ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ಬಹಳ ಜಾಗರೂಕತೆಯಿಂದ ಕೆಲಸ ಹುಡುಕಬೇಕು.