ಕಲ್ಲಂಬಲಂ: ವಧುವಿನ ತಂದೆಯನ್ನು ಮದುವೆಯ ಮನ್ನಾದಿನದಂದು ಆಕೆಯ ಮಾಜಿ ಪ್ರಿಯಕರ ಕೊಲೆ ಮಾಡಿರುವ ದಾರುಣ ಘಟನೆ ಕೇರಳದ ಕಲ್ಲಂಬಲಂನಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು 61ರ ಹರೆಯದ ರಾಜು ಎಂದು ಗುರುತಿಸಲಾಗಿದ್ದು, ಆತನನ್ನು ನೆರೆಮನೆಯ ಜಿಷ್ಣು ಎಂಬಾತ ಮೂರು ಜನರೊಂದಿಗೆ ಸೇರಿ ಕೊಲೆಗೈದಿದ್ದಾನೆ.
ವಧುವಿನ ಮಾಜಿ ಸ್ನೇಹಿತ ಜಿಷ್ಣು ಸೇರಿದಂತೆ ನಾಲ್ಕು ಸದಸ್ಯರ ತಂಡವು ಮಧ್ಯರಾತ್ರಿ 12.30 ರ ಸುಮಾರಿಗೆ ಆಕೆಯ ಮನೆ ಮುಂದೆ ಬಂದು ಗಲಾಟೆ ಮಾಡಲು ಪ್ರಾರಂಭಿಸಿತು. ಈ ವೇಳೆ ಜಿಷ್ಣವಿನ ಸಹೋದರ ಜಿಜಿನ್ ರಾಜುವಿಗೆ ಸಲಾಕೆಯಿಂದ ಹೊಡೆದಿದ್ದಾನೆ. ಇದನ್ನು ಪ್ರಶ್ನಿಸಿದ ಉಳಿದವರ ಮೇಲೂ ಅವರು ಹಲ್ಲೆಗೆ ಯತ್ನಿಸಿದ್ದಾರೆ. ಕೊನೆಗೆ ರಾಜುವನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆತನನ್ನು ಉಳಿಸಲು ಸಾಧ್ಯವಾಗಲಿಲ್ಲ.
ರಾಜುವಿನ ಮಗಳು ಹಾಗೂ ಜಿಷ್ಣು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು, ಆರೋಪಿಯ ಕುಟುಂಬ ಎರಡು ವರ್ಷಗಳ ಹಿಂದೆ ರಾಜವಿನ ಮಗಳ ಮದುವೆಯ ಪ್ರಸ್ತಾಪದೊಂದಿಗೆ ಬಂದಿತ್ತು ಆದರೆ ಆ ವೇಳೆ ರಾಜು, ಕ್ರಿಮಿನಲ್ ಹಿನ್ನೆಲೆಯುಳ್ಳ ಜಿಷ್ಣು, ಮಾದಕ ವ್ಯಸನ ಮತ್ತು ಮದ್ಯದ ಚಟ ಹೊಂದಿದ್ದರಿಂದ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದರು. ಪ್ರಸ್ತಾಪವನ್ನು ತಿರಸ್ಕರಿಸಿದ ನಂತರ ಆರೋಪಿಗಳು ಸಂತ್ರಸ್ತೆಯ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆ ಎಂದು ಅವರ ಸಂಬಂಧಿಗಳು ಹೇಳಿದ್ದಾರೆ.
ಘಟನೆಯಲ್ಲಿ ವಿಷ್ಣು ಸೇರಿದಂತೆ ನಾಲ್ವರು ಆರೋಪಿಗಳನ್ನು ಕಾಲಂಬಲಂ ಪೊಲೀಸರು ಬಂಧಿಸಿದ್ದಾರೆ. ರಾಜನ್ ಅವರ ಮೃತದೇಹವನ್ನು ವರ್ಕಳ ಎಸ್ ಎನ್ ಮಿಷನ್ ಆಸ್ಪತ್ರೆಯಲ್ಲಿ ಇಡಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ.