ಕುಂಬಳೆ : ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ನಾರಾಯಣಮಂಗಲ ಶ್ರೀ ಚೀರುಂಬಾ ಭಗವತೀ ದೇವಸ್ಥಾನದ ಗರ್ಭಗುಡಿ ಬಾಗಿಲು ಒಡೆದು ನುಗ್ಗಿದ ಕಳ್ಳರು ಬೆಳ್ಳಿಯ ಪ್ರಭಾವಳಿ, ಇದಕ್ಕೆ ತೊಡಿಸಿದ್ದ ಐದು ಪವನು ಚಿನ್ನದ ಆಭರಣ, ಕಾಣಿಕೆ ಹುಂಡಿಯಲ್ಲಿದ್ದ ನಗದು ದೋಚಿದ್ದಾರೆ. ಎಂಟು ಲಕ್ಷಕ್ಕೂ ಹೆಚ್ಚು ಮೌಲ್ಯದ ಆಭರಣ ಕಳವಾಗಿದೆ.
ಶುಕ್ರವಾರ ಬೆಳಗ್ಗೆ 5.30ಕ್ಕೆ ದೇಗುಲದಲ್ಲಿ ದೀಪ ಹಚ್ಚಲು ಆಗಮಿಸಿದ ರಾಜೇಂದ್ರ ಎಂಬವರಿಗೆ ಕಳವಿನ ಬಗ್ಗೆ ಅರಿವಾಗಿ ಕ್ಷೇತ್ರ ಸಮಿತಿ ಕಾರ್ಯದರ್ಶಿ ನರೇಂದ್ರ ಎಂಬವರಿಗೆ ಮಾಹಿತಿ ನೀಡಿದ್ದಾರೆ. ಕ್ಷೇತ್ರ ಸಮಿತಿ ಪದಾಧಿಕಾರಿಗಳೊಂದಿಗೆ ಆಗಮಿಸಿ ತಪಸಣೆ ನಡೆಸಿದಾಗ ಚಿನ್ನ, ಬೆಳ್ಳಿ ಆಭರಣದ ಜತೆಗೆ ಹುಂಡಿಯಲ್ಲಿದ್ದ 2ಸಾವಿರ ರೂ. ನಗದು ಕಳವಾಗಿರುವುದು ಬೆಳಕಿಗೆ ಬಂದಿದೆ.
ದೇವಸ್ಥಾನದ ಸುತ್ತುಗೋಪುರದ ಮುಖ್ಯದ್ವಾರದ ಬಾಗಿಲಿನ ಬೀಗ ಒಡೆದು ನುಗ್ಗಿದ ಕಳ್ಳರು ಗರ್ಭಗುಡಿ ಬಾಗಿಲನ್ನು ಒಡೆದು ಕೃತ್ಯವೆಸಗಿದ್ದಾರೆ. ಇದಕ್ಕೂ ಮೊದಲು ದೇವಸ್ಥಾನದ ಸಿಸಿ ಕ್ಯಾಮರಾವನ್ನು ಹಾನಿಗೊಳಿಸಿದ್ದಾರೆ. ಕುಂಬಳೆ ಠಾಣೆ ಇನ್ಸ್‍ಪೆಕ್ಟರ್ ಅನೂಪ್ ಕುಮಾರ್ ನೇತೃತ್ವದ ಪೊಲೀಸರ ತಂಡ, ಬೆರಳಚ್ಚು, ಶ್ವಾನದಳ ಸ್ಥಳಕ್ಕಾಗಮಿಸಿ ತಪಾಸಣೆ ನಡೆಸಿದ್ದಾರೆ. ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ಕಳ್ಳರ ಹಾವಳಿ ಹೆಚ್ಚಾಗಿದ್ದು, ಜಿಲ್ಲೆಯಲ್ಲಿ ಕಳೆದ ಎರಡು ವಾರಗಳಿಂದ ಕಳವಿನ ಕೃತ್ಯ ಗಣನೀಯವಾಗಿ ಹೆಚ್ಚಾಗಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ನಾರಾಯಣಮಂಗಲ ಶ್ರೀ ಚೀರುಂಬಾ ಭಗವತೀ ದೇವಸ್ಥಾನದಿಂದ ನಾಪತ್ತೆಯಾಗಿದ್ದ ಐದು ಪವನು ಚಿನ್ನಾಭರಣ ಅಳವಡಿಸಿದ್ದ ಬೆಳ್ಳಿ ಪ್ರಭಾವಳಿ ಗರ್ಭಗುಡಿಯೊಳಗಿಂದ ಪತ್ತೆಯಾಗಿದೆ.
ಗರ್ಭಗುಡಿ ಬಾಗಿಲು ಒಡೆದು ನುಗ್ಗಿದ್ದ ಕಳ್ಳರು ಬೆಳ್ಳಿಯ ಪ್ರಭಾವಳಿ, ಇದಕ್ಕೆ ತೊಡಿಸಿದ್ದ ಐದು ಪವನು ಚಿನ್ನದ ಆಭರಣ, ಕಾಣಿಕೆ ಹುಂಡಿಯಲ್ಲಿದ್ದ ನಗದು ದೋಚಿರುವ ಬಗ್ಗೆ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಬೆಳಗ್ಗೆ ದೇಗುಲದಲ್ಲಿ ದೀಪ ಹಚ್ಚಲು ಆಗಮಿಸಿದ ರಾಜೇಂದ್ರ ಎಂಬವರಿಗೆ ಕಳವಿನ ಬಗ್ಗೆ ಅರಿವಾಗಿ ಕ್ಷೇತ್ರ ಸಮಿತಿ ಕಾರ್ಯದರ್ಶಿ ನರೇಂದ್ರ ಎಂಬವರಿಗೆ ಮಾಹಿತಿ ನೀಡಿದ್ದರು. ಇವರು ನೀಡಿದ ದೂರಿನ ಮೇರೆಗೆ ಕೇಸು ದಾಖಲಾಗಿತ್ತು. ಮೇಲ್ನೋಟಕ್ಕೆ ನೋಡುವಾಗ ವಿಗ್ರಹದಿಂದ ಬೆಳ್ಳಿ ಪ್ರಭಾವಳಿ ತೆರವಾಗಿರುವುದು ಕಂಡುಬಂದಿತ್ತು. ಇನ್ನು ಪೊಲೀಸ್ ಅನುಮತಿಯಿಲ್ಲದೆ ಒಳಪ್ರವೇಶಿಸಲಾಗಿರಲಿಲ್ಲ. ದೇವಸ್ಥಾನದಿಂದ ಆಭರಣ ಕಳವಾಗಿರುವ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಕಳವಾದ ಆಭರಣಗಳು ಮತ್ತೆ ಕೈಸೆರುವಂತಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದರು. ಸಂಜೆ ವೇಳೆಗೆ ಪೊಲೀಸರು ಬೆರಳಚ್ಚು ತಜ್ಞರೊಂದಿಗೆ ದೇವಾಲಯಕ್ಕೆ ಆಗಮಿಸಿ ಗರ್ಭಗುಡಿ ಪ್ರವೇಶಿಸಿ ತಪಾಸಣೆಗೆ ಮುಂದಗುತ್ತಿದ್ದಂತೆ ಬಟ್ಟೆಯಲ್ಲಿ ಸುತ್ತಿಡಲಾಗಿದ್ದ ಪ್ರಭಾವಳಿ ಮತ್ತು ಚಿನ್ನದ ಆಭರಣ ಪತ್ತೆಯಾಗಿದೆ. ವಿಗ್ರಹದಿಂದ ಚಿನ್ನ ಅಳವಡಿಸಿದ ಬೆಳ್ಳಿ ಪ್ರಭಾವಳಿಯನ್ನು ಕಳ್ಳರು ಕಳಚಿ ಬಟ್ಟೆಯಲ್ಲಿ ಸುತ್ತಿಟ್ಟಿದ್ದು, ಯಾವುದೋ ಕಾರಣದಿಂದ ಹೊರಗೆ ಕೊಂಡೊಯ್ಯುವಲ್ಲಿ ವಿಫಲರಾಗಿದ್ದರೆನ್ನಲಾಗಿದೆ.
ಆಭರಣ ಪತ್ತೆಯಾದ ಮಾಹಿತಿ ಹೊರಬರುತ್ತಿದ್ದಂತೆ ಮತ್ತೆ ಭಕ್ತಾದಿಗಳು ದಏವಸ್ಥಾನಕ್ಕೆ ಬರಲಾರಂಭಿಸಿದ್ದಾರೆ. ಪೊಲೀಸರು ಪತ್ತೆಯಾಗಿರುವ ಆಭರಣಗಳನ್ನು ವಶಕ್ಕೆ ತೆಗೆದುಕೊಂಡಿದ್ದು, ಬೆರಳಚ್ಚು ಸಂಗ್ರಹಿಸಿಕೊಂಡಿದ್ದಾರೆ. ಆಭರಣ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.