ನವದೆಹಲಿ: 'ಮಹಿಳಾ ಕುಸ್ತಿಪಟುಗಳ ಜೊತೆ ಬ್ರಿಜ್‌ಭೂಷಣ್ ಅನುಚಿತವಾಗಿ ವರ್ತಿಸುತ್ತಾರೆಂದು ಕೇಳಿದ್ದೆ. ನಾನು ತರಬೇತಿಯಲ್ಲಿದ್ದಾಗ ಪ್ರತ್ಯೇಕವಾಗಿ ಭೇಟಿಯಾಗುವಂತೆ ಹೇಳಿದ್ದರು. ಒಂಟಿಯಾಗಿ ಅವರ ಭೇಟಿಗೆ ನಿರಾಕರಿಸಿದ್ದೆ. ಮತ್ತೆ ಅವರಿಂದ ಕರೆ ಬಂದಾಗ ಹೋದೆ.
-ಇದು ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ವಿರುದ್ಧ ದೆಹಲಿ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಮಹಿಳಾ ಕುಸ್ತಿಪಟುವೊಬ್ಬರು ನೀಡಿರುವ ಹೇಳಿಕೆ.
ಏಪ್ರಿಲ್ 28ರಂದು ಬಾಲಕಿಯ ತಂದೆ ಸೇರಿದಂತೆ ಏಳು ಮಹಿಳಾ ಕುಸ್ತಿಪಟುಗಳು ಬ್ರಿಜ್‌ಭೂಷಣ್ ವಿರುದ್ಧ ನೀಡಿದ ದೂರಿನ ಅನ್ವಯ ಎರಡು ಎಫ್‌ಐಆರ್ ದಾಖಲಾಗಿವೆ. ದೂರಿನ ಸಂಪೂರ್ಣ ವಿವರ ಬಹಿರಂಗಗೊಂಡಿದೆ.
'ಮಹಿಳಾ ಕುಸ್ತಿಪಟುಗಳು ಅವರಿಂದ ತಪ್ಪಿಸಿಕೊಳ್ಳಲು ಹೋಟೆಲ್‌ನ ಕೊಠಡಿಗಳಿಗೆ ತೆರಳುವಾಗ ಗುಂಪಿನಲ್ಲಿ ಹೋಗುತ್ತಿದ್ದರು. ನಾನು ಹೋಟೆಲ್‌ನಲ್ಲಿದ್ದಾಗ ಇದನ್ನು ಗಮನಿಸಿದ್ದೇನೆ' ಎಂದು ಕುಸ್ತಿಪಟು ದೂರಿನಲ್ಲಿ ವಿವರಿಸಿದ್ದಾರೆ.
ಒಂದು ದಶಕದ ಅವಧಿಯಲ್ಲಿ ದೇಶದ ವಿವಿಧೆಡೆ ಹಾಗೂ ವಿದೇಶಗಳಲ್ಲಿ ನಡೆದ ಟೂರ್ನಿಗಳ ವೇಳೆ ಬ್ರಿಜ್‌ಭೂಷಣ್ ಅನುಚಿತವಾಗಿ ವರ್ತಿಸಿದ್ದನ್ನು ಕುಸ್ತಿಪಟುಗಳು ಎಳೆ ಎಳೆಯಾಗಿ ದೂರಿನಲ್ಲಿ ಬಿಡಿಸಿಟ್ಟಿದ್ದಾರೆ. ಅವರ ವಿರುದ್ಧ ಐಪಿಸಿ ಸೆಕ್ಷನ್ 354 (ಮಹಿಳೆಯ ಘನತೆಗೆ ಧಕ್ಕೆ), 354ಎ (ಲೈಂಗಿಕ ಕಿರುಕುಳ), 354ಡಿ(ಮಹಿಳೆಯನ್ನು ಹಿಂಬಾಲಿಸುವುದು) ಹಾಗೂ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಎಫ್‌ಐಆರ್‌ನಲ್ಲಿ ಫೆಡರೇಷನ್ ಕಾರ್ಯದರ್ಶಿ ವಿನೋದ್ ತೊಮರ್ ಅವರ ಹೆಸರೂ ಇದೆ.
ಕೋಚ್ ಇಲ್ಲದಿದ್ದಾಗ ಕಿರುಕುಳ:
'ನಾನು ಕ್ರೀಡಾಂಗಣದ ಮ್ಯಾಟ್ ಮೇಲೆ ವಾರ್ಮ್ ಅಪ್ ಮಾಡುವಾಗ ಮೂಲೆಯೊಂದರಲ್ಲಿ ನಿಂತು ನನ್ನನ್ನು ನೋಡುತ್ತಿದ್ದರು. ನಾನು ಮ್ಯಾಟ್ ಮೇಲೆ ಬಾಗಿದಾಗ ಹತ್ತಿರ ಬಂದರು. ಇದರಿಂದ ನನಗೆ ಅಚ್ಚರಿಯಾಯಿತು. ಆಗ ನನ್ನ ಕೋಚ್ ಸ್ಥಳದಲ್ಲಿ ಇರಲಿಲ್ಲ. ಎದೆಯ ಬಡಿತ ಪರೀಕ್ಷಿಸುವುದಾಗಿ ಹೇಳಿ ನನ್ನ ಒಪ್ಪಿಗೆ ಇಲ್ಲದೆಯೇ ಟೀಶರ್ಟ್ ಎಳೆದು ಎದೆಯ ಭಾಗವನ್ನು ಸ್ಪರ್ಶಿಸಿದರು. ಹೊಟ್ಟೆವರೆಗೆ ಕೈಯಾಡಿಸಿ ಅನುಚಿತವಾಗಿ ವರ್ತಿಸಿದರು' ಎಂದು ಎರಡನೇ ಕುಸ್ತಿಪಟು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪೃಷ್ಠ ಮುಟ್ಟಿದರು:
ಗುಂಪಿನ ಛಾಯಾಚಿತ್ರ ತೆಗೆದುಕೊಳ್ಳುವಾಗ ಆದ ಕಹಿ ಅನುಭವವನ್ನು ಮೂರನೇ ಕುಸ್ತಿಪಟು ಬಿಚ್ಚಿಟ್ಟಿದ್ದಾರೆ. 'ಅಂದು ಕುಸ್ತಿಪಟುಗಳ ಗುಂಪು ಫೋಟೊ ತೆಗೆಯುವ ಕಾರ್ಯಕ್ರಮವಿತ್ತು. ಉಳಿದವರ ಬರುವಿಕೆಗಾಗಿ ನಾನು ಬದಿಯಲ್ಲಿ ನಿಂತು ಕಾಯುತ್ತಿದ್ದೆ. ನನ್ನ ಬಳಿಗೆ ಬಂದು ನಿಂತರು. ಅವರ ಕೈ ನನ್ನ ಪೃಷ್ಠ ಮುಟ್ಟಿದಾಗ ಭಯಗೊಂಡೆ. ಅಲ್ಲಿಂದ ತೆರಳಲು ಮುಂದಾದೆ. ಆಗ ಅವರು ಬಲವಂತವಾಗಿ ನನ್ನ ಭುಜ ಹಿಡಿದರು. ಅವರಿಂದ ಬಿಡಿಸಿಕೊಳ್ಳಲು ಹೆಣಗಾಟ ನಡೆಸಿದೆ' ಎಂದಿದ್ದಾರೆ.
ಫೋಟೊ ಕ್ಲಿಕ್ಕಿಸುವ ನೆಪ:
ಫೋಟೊ ಕ್ಲಿಕ್ಕಿಸಿಕೊಳ್ಳುವಾಗ ನಡೆದ ಕಿರುಕುಳವನ್ನು ನಾಲ್ಕನೇ ಕುಸ್ತಿಪಟು ಹೇಳಿಕೆಯಲ್ಲಿ ದಾಖಲಿಸಿದ್ದಾರೆ. 'ಅಂದು ಪದಕ ವಿತರಣೆಯ ಸಮಾರಂಭವಿತ್ತು. ಆಗ ನನ್ನನ್ನು ಕರೆದು ವೈಯಕ್ತಿಕ ಪ್ರಶ್ನೆಗಳನ್ನು ಕೇಳಿದರು. ಸಮಾರಂಭ ಮುಗಿದ ಬಳಿಕ ಫೋಟೊ ಕ್ಲಿಕ್ಕಿಸುವ ನೆಪದಲ್ಲಿ ನನ್ನನ್ನು ಬಲವಂತವಾಗಿ ಅವರತ್ತ ಬರ ಸೆಳೆದು ಭುಜವನ್ನು ಗಟ್ಟಿಯಾಗಿ ಹಿಡಿದುಕೊಂಡರು. ನನ್ನ ಬಳಿ ಮೊಬೈಲ್ ಇಲ್ಲವೆಂದು ಹೇಳಿ ಅವರಿಂದ ಬಿಡಿಸಿಕೊಳ್ಳಲು ಮುಂದಾದೆ. ಆಗ ಅವರು ನನ್ನ ಮೊಬೈಲ್‌ನಲ್ಲಿಯೇ ಫೋಟೊ ಕ್ಲಿಕ್ಕಿಸಿಕೊಳ್ಳುತ್ತೇನೆಂದು ಹೇಳಿದರು' ಎಂದು ವಿವರಿಸಿದ್ದಾರೆ.
ಪೌಷ್ಟಿಕಾಂಶ ಕೊಡಿಸುವ ಭರವಸೆ:
ಲೈಂಗಿಕ ಆಸೆ ಪೂರೈಸಿದರೆ ಕುಸ್ತಿಗೆ ಅಗತ್ಯವಿರುವ ಪೌಷ್ಟಿಕಾಂಶಗಳನ್ನು ಕೊಡಿಸುವ ಆಮಿಷವೊಡ್ಡಿದ್ದರು ಎಂದು ಐದನೇ ಕುಸ್ತಿಪಟು ಹೇಳಿದ್ದಾರೆ.
'ನಾನಾಗ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದಿದ್ದೆ. ಕೊಠಡಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ನನ್ನಲ್ಲಿಗೆ ಬಂದ ಫಿಜಿಯೊ, ಅಧ್ಯಕ್ಷರು ನಿನ್ನನ್ನು ಕರೆಯುತ್ತಿದ್ದಾರೆಂದರು. ಪದಕ ಗೆದ್ದಿರುವುದರಿಂದ ಅಭಿನಂದಿಸಲು ಕರೆಯುತ್ತಿರಬಹುದೆಂದು ಭಾವಿಸಿದೆ. ಅವರಿದ್ದ ಕೊಠಡಿ ಪ್ರವೇಶಿಸಿದಾಗ ನನ್ನ ಪೋಷಕರ ಮೊಬೈಲ್ ನಂಬರ್ ಕೇಳಿದರು. ನನ್ನ ಬಳಿ ಆಗ ಮೊಬೈಲ್ ನಂಬರ್ ಇರಲಿಲ್ಲ. ಪೋಷಕರ ಜೊತೆಗೆ ಮಾತನಾಡುವಂತೆ ಅವರದ್ದೇ ಮೊಬೈಲ್ ನೀಡಿದರು. ನಾನು ಸಂಭಾಷಣೆ ಮುಗಿಸಿದಾಗ ಅವರು ಕುಳಿತಿದ್ದ ಬೆಡ್ ಬಳಿಗೆ ಕರೆದರು. ಹತ್ತಿರಕ್ಕೆ ಹೋದಾಗ ಆಲಂಗಿಸಿಕೊಂಡರು' ಎಂದು ಹೇಳಿಕೆ ದಾಖಲಿಸಿದ್ದಾರೆ.
ಮಾನಸಿಕವಾಗಿ ಜರ್ಜರಿತ:
'ಬ್ರಿಜ್‌ಭೂಷಣ್ ನೀಡಿದ ಕಿರುಕುಳದಿಂದ ನನ್ನ ಪುತ್ರಿ ಮಾನಸಿಕವಾಗಿ ಜರ್ಜರಿತಳಾಗಿದ್ದು, ದೆವ್ವ ಬಂದವಳಂತೆ ವರ್ತಿಸುತ್ತಾಳೆ. ಪದಕ ಗೆದ್ದಿದ್ದ ನನ್ನ ಮಗಳೊಂದಿಗೆ ಫೋಟೊ ಕ್ಲಿಕ್ಕಿಸಿಕೊಳ್ಳುವ ನೆಪದಲ್ಲಿ ಅವಳನ್ನು ತನ್ನತ್ತ ಬರ ಸೆಳೆದುಕೊಂಡು ಗಟ್ಟಿಯಾಗಿ ಭುಜ ಹಿಡಿದು ಎದೆಯ ಭಾಗವನ್ನು ಸ್ಪರ್ಶಿಸಿದ್ದಾರೆ' ಎಂದು ಬಾಲಕಿ ತಂದೆ ದೂರಿನಲ್ಲಿ ತಿಳಿಸಿದ್ದಾರೆ.
ಮೋದಿ ಮೌನ ಪ್ರಶ್ನಿಸಿದ ಸಿಬಲ್
: 'ಬ್ರಿಜ್‌ಭೂಷಣ್ ವಿರುದ್ಧ ಕೇಳಿಬಂದಿರುವ ಲೈಂಗಿಕ ಕಿರುಕುಳದ ಆರೋಪಕ್ಕೆ ಸಾಕಷ್ಟು ಸಾಕ್ಷ್ಯಗಳಿವೆ. ಆದರೆ ಅವರ ವಿರುದ್ಧ ತನಿಖೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಮೌನವಹಿಸಿದೆ' ಎಂದು ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ದೂರಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಮಹಿಳಾ ಕುಸ್ತಿಪಟುಗಳ ಪರ ವಾದಿಸುತ್ತಿರುವ ಸಿಬಲ್ 'ಬ್ರಿಜ್‌ಭೂಷಣ್ ವಿರುದ್ಧ ತನಿಖೆ ನಡೆಸಲು ಹಲವು ಸಾಕ್ಷ್ಯಗಳಿವೆ. ಜನರ ಒತ್ತಾಯವೂ ಇದೆ. ಆದರೂ ಅವರನ್ನು ಬಂಧಿಸಿಲ್ಲ. ಪ್ರಧಾನಿ ಗೃಹ ಸಚಿವರು ಬಿಜೆಪಿ ಹಾಗೂ ಆರೆಸ್ಸೆಸ್ ಮೌನವಾಗಿದ್ದು ಬ್ರಿಜ್‌ಭೂಷಣ್‌ಗೆ ಬೆಂಬಲ ನೀಡುತ್ತಿದ್ದಾರೆ' ಎಂದು ದೂರಿದ್ದಾರೆ.