ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿ ಪಡ್ರೆ ಗ್ರಾಮದ ವಾಣಿನಗರ ಪ್ರದೇಶದ ಸಾರಿಗೆ ಸಂಚಾರ ಹಾಗೂ ರಸ್ತೆ, ಅರಣ್ಯ ಇಲಾಖೆಯ ಮರದ ಭೀತಿ ನಿಗ್ರಹಕ್ಕೆ ಮಾನವ ಹಕ್ಕು ಆಯೋಗದ ಆದೇಶದಂತೆ ಜಿಲ್ಲಾ ಕಾನೂನು ಪ್ರಾಧಿಕಾರದ ಉಪ ನ್ಯಾಯಾಧೀಶೆ ವಂದನಾ ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಗಳನ್ನು ಅವಲೋಕಿಸಿದರು.
ಪೆರ್ಲ ಚೆಕ್ ಪೋಸ್ಟ್ ರಸ್ತೆಯಿಂದ, ಸ್ವರ್ಗ ದಾರಿಯಲ್ಲಾಗಿ ವಾಣಿನಗರಕ್ಕೆ ಸಂಚರಿಸಿ ರಸ್ತೆ ಹಾಗೂ ಅರಣ್ಯ ಇಲಾಖೆಯ ಮರ ಬೀಳುವ ಭೀತಿಯ ಬಗ್ಗೆ ವೀಕ್ಷಿಸಿದರು. ಬಳಿಕ ಪಡ್ರೆ ಸರ್ಕಾರಿ ಶಾಲಾ ಪರಿಸರಕ್ಕೆ ಆಗಮಿಸಿದ ನ್ಯಾಯಾಧೀಶೆ ನೆರೆದ ಸಾರ್ವಜನಿಕರ ಅಹವಾಲು ಆಲಿಸಿದರು. ಬಳಿಕ ಸಂಬಂಧಪಟ್ಟ ಇಲಾಖೆಗಳಿಗೆ ಸೂಕ್ತ ಕ್ರಮವನ್ನು ಶೀಘ್ರವೇ ಕೈಗೊಳ್ಳುವಂತೆ ಆದೇಶಿಸಿದರು.
ಈ ಸಂದರ್ಭದಲ್ಲಿ ಎಣ್ಮಕಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಸೋಮಶೇಖರ್ ಜೆ.ಎಸ್, ಪಂಚಾಯತಿ ಸದಸ್ಯರಾದ ಎಸ್.ಬಿ.ನರಸಿಂಹ ಪೂಜಾರಿ, ರಾಮಚಂದ್ರ ಎಂ, ಫಾರೆಸ್ಟ್ ರೇಂಜ್ ಆಫೀಸರ್ ರಮೇಶ್, ಮೋಟಾರು ವಾಹನ ಇಲಾಖೆಯ ಇನ್ಸ್‍ಫೆಕ್ಟರ್ ಪ್ರಜೀತ್, ಲೋಕೋಪಯೋಗಿ ಇಲಾಖೆಯ ಸಹಾಯಕ ಎಕ್ಸಿಟ್ಯೂವ್ ಇಂಜಿನಿಯರ್ ಸುನಿಲ್, ಸಾರಿಗೆ ಇಲಾಖೆಯ ಸಹಾಯಕ ಇನ್ಸ್‍ಫೆಕ್ಟರ್ ಪ್ರಿಯೇಶ್ ಕುಮಾರ್, ಎಣ್ಮಕಜೆ ಗ್ರಾ.ಪಂ.ಕಾರ್ಯದರ್ಶಿ ಆರ್.ಸುನಿಲ್, ಪಡ್ರೆ ಸರ್ಕಾರಿ ಹೈಯರ್ ಸೆಕೆಂಡರಿ ಸಹಾಯಕ ಪ್ರಾಂಶುಪಾಲ ದಿನೇಶ್ ಕೆ, ಸಾಮಾಜಿಕ ಮುಂದಾಳುಗಳಾದ ಕೃಷ್ಣ ಕುಮಾರ್, ಪತ್ತಡ್ಕ ರಾಧಾಕೃಷ್ಣ ಭಟ್, ಸುಮಿತ್ ರಾಜ್ ಮೊದಲಾದವರು ಮಾತನಾಡಿದರು.