ನವದೆಹಲಿ (PTI): ಕೆನಡಾದ ಬ್ರಾಂಪ್ಟನ್ ನಗರದಲ್ಲಿ ಖಾಲಿಸ್ತಾನ ಪ್ರತ್ಯೇಕತಾವಾದಿಗಳು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಯ ಸ್ತಬ್ಧಚಿತ್ರದ ಮೆರವಣಿಗೆ ನಡೆಸಿರುವುದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಭಾರತ ವಿರೋಧಿ ಕೃತ್ಯಗಳಿಗೆ ಕೆನಡಾ ಸರ್ಕಾರ ಮಣೆ ಹಾಕುತ್ತಿದ್ದು, ಉಭಯ ದೇಶಗಳ ನಡುವಣ ದ್ವಿಪಕ್ಷೀಯ ಸಂಬಂಧಗಳ ವೃದ್ಧಿಗೆ ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಹೇಳಿದೆ.
ಮಾಜಿ ಪ್ರಧಾನಿಯನ್ನು ಹತ್ಯೆಗೈಯ್ಯುತ್ತಿರುವ ಸ್ತಬ್ಧಚಿತ್ರ ಸಹಿತ ಖಾಲಿಸ್ತಾನ ಪ್ರತ್ಯೇಕತಾವಾದಿಗಳು ಇಂದಿರಾ ಗಾಂಧಿ ಹತ್ಯೆಯ ಸಂಭ್ರಮಾಚರಣೆಯ ಮೆರವಣಿಗೆ ನಡೆಸಿ ವಿಕೃತಿ ಮೆರೆದಿದ್ದಾರೆ. ಈ ಕುರಿತ ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿದೆ. ವಿದೇಶಾಂಗ ಸಚಿವ ಜೈಶಂಕರ್ ಅವರೂ ಈ ಕೃತ್ಯವನ್ನು ಕಟುವಾಗಿ ಖಂಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಒಂಬತ್ತು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೈಶಂಕರ್, 'ಭಾರತ ವಿರೋಧಿ ಸಂಘಟನೆಗಳಿಗೆ ತನ್ನ ನೆಲದಲ್ಲಿ ಚಟುವಟಿಕೆ ನಡೆಸಲು ಕೆನಡಾ ಅವಕಾಶ ನೀಡುತ್ತಿದೆ. ಪ್ರತ್ಯೇಕತಾವಾದಿಗಳು, ಉಗ್ರವಾದಿಗಳು ಮತ್ತು ಹಿಂಸೆಯನ್ನು ಉತ್ತೇಜಿಸುವವರಿಗೆ ಅವಕಾಶ ನೀಡುವ ಕೆನಡಾದ ಧೋರಣೆಯಲ್ಲಿ ಬೇರೆಯದ್ದೇ ರಾಜಕಾರಣ ಅಡಗಿದೆ' ಎಂದು ಟೀಕಿಸಿದರು.
ಇಂದಿರಾ ಹತ್ಯೆಯ ಸಂಭ್ರಮಾಚರಣೆ ಕುರಿತು ಭಾರತದಲ್ಲಿರುವ ಕೆನಡಾ ರಾಯಭಾರಿ ಕ್ಯಾಮರಾನ್ ಮ್ಯಾಕೇ ಕೂಡ ತಬ್ಬಿಬ್ಬುಕೊಂಡಿದ್ದಾರೆ. 'ದ್ವೇಷ ಅಥವಾ ಹಿಂಸೆಯ ವೈಭವೀಕರಣಕ್ಕೆ ಕೆನಡಾದಲ್ಲಿ ಜಾಗವಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆಯ 39ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆಸಲಾಗಿದೆ ಎನ್ನಲಾಗಿದೆ.
ಕೆನಡಾ ಜೊತೆಗೆ ಚರ್ಚಿಸಿ: ಸ್ತಬ್ಧಚಿತ್ರದ ಮೆರವಣಿಗೆ ವಿರುದ್ಧ ಕೆನಡಾ ಸರ್ಕಾರದ ಜೊತೆ ವಿದೇಶಾಂಗ ಸಚಿವರು ಪ್ರಖರವಾಗಿ ಚರ್ಚೆ ನಡೆಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
'ಸ್ತಬ್ಧಚಿತ್ರದ ಮೆರವಣಿಗೆಯು 5 ಕಿ.ಮೀ ದೂರ ಸಾಗಿದೆ ಎಂದು ತಿಳಿದು ನಾನು ಗಾಬರಿಗೊಂಡೆ. ಇದು ಪರ-ವಿರೋಧದ ಚರ್ಚೆಯಲ್ಲ. ಇದು ಒಂದು ದೇಶದ ಇತಿಹಾಸ ಮತ್ತು ಆ ದೇಶದ ಪ್ರಧಾನಿಯ ಹತ್ಯೆಯಾದಾಗ ಉಂಟಾಗುವ ನೋವನ್ನು ಗೌರವಿಸುವ ಕುರಿತ ವಿಷಯವಾಗಿದೆ' ಎಂದು ಕಾಂಗ್ರೆಸ್ ನಾಯಕ ಮಿಲಿಂದ್ ದೇವಡಾ ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್ ಅನ್ನು ಮರುಟ್ವೀಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್, 'ಈ ಕುರಿತು ನನ್ನ ಸಂಪೂರ್ಣ ಸಹಮತವಿದೆ. ಇದು ಅತ್ಯಂತ ಹೀನ ಕೃತ್ಯ. ಜೈಶಂಕರ್ ಅವರು ಕೆನಡಾ ಸರ್ಕಾರದ ಜೊತೆಗೆ ಚರ್ಚಿಸಬೇಕು' ಎಂದಿದ್ದಾರೆ.
'ಸುಳ್ಳು ವ್ಯಾಖ್ಯಾನಗಳಿಗೆ ಬಲಿಯಾಗುವುದಿಲ್ಲ'
'ಭಾರತವು ಬೆದರಿಕೆ ಪ್ರಲೋಭನೆ ಮತ್ತು ಸುಳ್ಳು ವ್ಯಾಖ್ಯಾನಗಳ ಪ್ರಭಾವಕ್ಕೆ ಈಡಾಗುವುದಿಲ್ಲ' ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಹೇಳಿದರು. ದೇಶದ ಉತ್ತರ ಭಾಗದ ಗಡಿಯಲ್ಲಿನ ಪರಿಸ್ಥಿತಿ ಮತ್ತು ಚೀನಾದ 'ಒನ್ ಬೆಲ್ಟ್ ಮತ್ತು ರೋಡ್' ಯೋಜನೆ ಕುರಿತು ಮಾತನಾಡಿದ ಅವರು 'ಗಡಿಯಲ್ಲಿನ ಭಯೋತ್ಪಾದನೆಯನ್ನು ದೇಶವು ಕಾನೂನುಬಾಹಿರಗೊಳಿಸಿದೆ' ಎಂದು ಹೇಳಿದರು. ದೇಶದ ವಿದೇಶಾಂಗ ನೀತಿಗಳು ಪ್ರಮುಖ ದೇಶಗಳ ಜೊತೆ ಭಾರತ ಹೊಂದಿರುವ ಸಂಬಂಧ ಕುರಿತು ಒತ್ತಿ ಹೇಳಿದ ಅವರು 'ಜಗತ್ತಿನ ಬಹುಭಾಗವು ಭಾರತವನ್ನು ಅಭಿವೃದ್ಧಿಯ ಸಹಭಾಗಿ ಎಂದು ಪರಿಗಣಿಸುತ್ತಿದೆ. ಜಗತ್ತಿನ ದಕ್ಷಿಣ ಭೂ ಭಾಗದ ದೇಶಗಳು ಭಾರತವನ್ನು ವಿಶ್ವಾಸಾರ್ಹ ಸಹಭಾಗಿ ದೇಶವೆಂದು ಪರಿಗಣಿಸುತ್ತಿವೆ. ಆರ್ಥಿಕತೆಯಲ್ಲಿ ನಾವು ಮಹತ್ವದ ಪ್ರಭಾವ ಬೀರುತ್ತಿದ್ದೇವೆ. ಇದನ್ನು ಜಗತ್ತಿನಾದ್ಯಂತ ಗುರುತಿಸಲಾಗುತ್ತಿದೆ ಎಂದರು.
'ಭಾರತ ಟೀಕಿಸುವುದು ರಾಹುಲ್‌ಗೆ ಚಟ'
'ವಿದೇಶಗಳಲ್ಲಿ ಭಾರತವನ್ನು ಟೀಕಿಸುವುದನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಚಟವನ್ನಾಗಿ ಮಾಡಿಕೊಂಡಿದ್ದಾರೆ. ಆಂತರಿಕ ರಾಜಕಾರಣವನ್ನು ದೇಶದ ಹೊರಗೆ ಚರ್ಚಿಸುವುದು 'ದೇಶದ ಹಿತಾಸಕ್ತಿ' ಎನಿಸಿಕೊಳ್ಳುವುದಿಲ್ಲ' ಎಂದು ಜೈಶಂಕರ್ ಹೇಳಿದರು. ಅಮೆರಿಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಹಲವಾರು ಕಾರಣಗಳಿಗೆ ಟೀಕಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಜೈಶಂಕರ್ 'ಜಗತ್ತು ನಮ್ಮನ್ನು ಗಮನಿಸುತ್ತಿರುತ್ತದೆ' ಎಂದರು.
ಲಡಾಕ್‌ನಲ್ಲಿ ಶಾಂತಿಗೆ ಸಂದೇಶ ರವಾನೆ
ಪೂರ್ವ ಲಡಾಕ್‌ನ ಗಡಿ ಭಾಗದಲ್ಲಿ ಶಾಂತಿಯ ವಾತಾವರಣ ನೆಲೆಸದ ಹೊರತು ನೆರೆಯ ದೇಶದೊಂದಿಗೆ ಯಾವುದೇ ರೀತಿಯ ಸಂಬಂಧ ಸಾಧ್ಯವಿಲ್ಲ ಎಂದು ಚೀನಾಕ್ಕೆ ಭಾರತವು ಸ್ಪಷ್ಟ ಸಂದೇಶ ರವಾನಿಸಿದೆ. 'ಚೀನಾ ಜೊತೆಗಿನ ಬಾಂಧವ್ಯವನ್ನು ಸುಧಾರಿಸುವ ಆಸೆ ನಮಗೂ ಇದೆ. ಆದರೆ ಲಡಾಕ್ ಗಡಿಯಲ್ಲಿ ಸೇನೆ ಜಮಾವಣೆ ಮಾಡುವುದನ್ನು ಚೀನಾ ಮುಂದುವರಿದಿದೆ. ಇದೇ ಅಲ್ಲಿನ ದೊಡ್ಡ ಸಮಸ್ಯೆಯಾಗಿದೆ. ಅಲ್ಲಿ ಯಥಾಸ್ಥಿತಿ ಕಾಯ್ದುಕೊಂಡರಷ್ಟೇ ಆ ದೇಶದೊಂದಿಗಿನ ಸಂಬಂಧ ಬಲಗೊಳ್ಳಲು ಸಾಧ್ಯ' ಎಂದು ಜೈಶಂಕರ್ ಸ್ಪಷ್ಟಪಡಿಸಿದರು. 'ಗಡಿಯಲ್ಲಿ ಶಾಂತಿ ಕಾಪಾಡಿಕೊಳ್ಳುವಂತೆ ಭಾರತ ಈಗಾಗಲೇ ಸ್ಪಷ್ಟಪಡಿಸಿದೆ. ಅದರ ಹೊರತಾಗಿ ಉಭಯ ದೇಶಗಳ ನಡುವಣ ಸಂಬಂಧ ಸುಧಾರಣೆ ಕಷ್ಟಸಾಧ್ಯ' ಎಂದು ಪುನರುಚ್ಚರಿಸಿದರು.