ನವದೆಹಲಿ: ಲೈಂಗಿಕ ಕಿರುಕುಳ ನೀಡಿರುವ ಆರೋಪ ಹೊತ್ತಿರುವ ಭಾರತದ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ವಿರುದ್ಧ ಸಲ್ಲಿಕೆಯಾಗಿದರುವ ಆರೋಪಪಟ್ಟಿಯ ಪ್ರತಿಯನ್ನು ನೀಡುವಂತೆ ದೂರುದಾರ ಮಹಿಳಾ ಕುಸ್ತಿಪಟುಗಳು ದೆಹಲಿಯ ನ್ಯಾಯಾಲಯವೊಂದಕ್ಕೆ ಸೋಮವಾರ ಮನವಿ ಮಾಡಿದ್ದಾರೆ.
ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿ ಬ್ರಿಜ್ ಭೂಷಣ್ ವಿರುದ್ಧ ದೆಹಲಿ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದಾರೆ. ಡಬ್ಲ್ಯುಎಫ್‌ಐನ ಉಚ್ಚಾಟಿತ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ಅವರ ಹೆಸರನ್ನೂ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಈ ಆರೋಪಪಟ್ಟಿಯನ್ನು ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಹರ್ಜೀತ್ ಸಿಂಗ್ ಜಸ್ಪಾಲ್ ಅವರು ಮಂಗಳವಾರ ಗಣನೆಗೆ ತೆಗೆದುಕೊಳ್ಳಲಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರಾಮಾಣೀಕರಿಸಿದ ಆರೋಪಪಟ್ಟಿಯ ಪ್ರತಿಗಾಗಿ ಅರ್ಜಿ ಸಲ್ಲಿಸುವಂತೆ ನ್ಯಾಯಾಲಯವು ಅರ್ಜಿದಾರ ಕುಸ್ತಿಪಟುಗಳ ಪರ ವಕೀಲರಿಗೆ ನಿರ್ದೇಶಿಸಿದೆ.